ಉಪೇಂದ್ರ ಮತ್ತು ‘ಕಿಚ್ಚ’ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ‘ಕಬ್ಜ’ದ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್’ನ ಪ್ರತಿಷ್ಠಿತ ನಿರ್ಮಾಣ ಮತ್ತು ವಿತರಣಾ ಸಂಸ್ಥೆ ಆನಂದ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ.
ಗುರುವಾರ ‘ಕಬ್ಜ’ ಚಿತ್ರದ ಹಿಂದಿ ಟೀಸರ್ ಬಿಡುಗಡೆಯಾಗಿದೆ. ಆರ್. ಚಂದ್ರು ನಿರ್ಮಿಸಿ, ನಿರ್ದೇಶಿಸಿರುವ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದೆ.
ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗಲಿದೆ. ಸದ್ಯದಲ್ಲೇ ಚಿತ್ರದ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸುವುದಾಗಿ ಚಂದ್ರು ತಿಳಿಸಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ’… ಇಂಥದ್ದೊಂದು ಕಥೆ ಇರುವ ‘ಕಬ್ಜ’ ಚಿತ್ರದ ಮೇಲೆ ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆಗಳಿವೆ.
ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ‘ಭಾರ್ಗವ್ ಭಕ್ಷಿ’ ಎಂಬ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ‘ಕಬ್ಜ’ ಕೋಟೆಯಲ್ಲಿ ‘ಮಧುಮತಿ’ಯಾಗಿ ಬಹುಭಾಷಾ ನಟಿ ಶ್ರಿಯಾ ಸರಣ್ ಬಣ್ಣಹಚ್ಚಿದ್ದಾರೆ.
ಬಾಲಿವುಡ್ನ ಖ್ಯಾತ ನಟ ನವಾಬ್ ಶಾ ಹಾಗೂ ಕೆ.ಜಿ.ಎಫ್ ಸಿನಿಮಾದಲ್ಲಿ ರಾಜೇಂದ್ರ ದೇಸಾಯಿ ಪಾತ್ರ ನಿರ್ವಹಿಸಿದ್ದ ಲಕ್ಷ್ಮೀಶ ಲಕ್ಷ್ಮಣ್, ತಮಿಳಿನ ‘ಐ’ ಚಿತ್ರದ ಖ್ಯಾತಿಯ ಕಾಮರಾಜನ್, ಜಗಪತಿ ಬಾಬು, ರಾಹುಲ್ ದೇವ್, ಸುನೀಲ್ ಪುರಾಣಿಕ್, ಪ್ರಮೋದ್ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.