ಕ್ರೂರತನ ಮತ್ತು ಬಲಹೀನತೆಗೆ ಸಂಬಂಧಿಸಿದ ಫಿಲಾಸಫಿಯನ್ನು ಪ್ರಧಾನವಾಗಿ ಇಟ್ಟುಕೊಂಡು ‘ಅನರ್ಥ’ ಸಿನಿಮಾ ಮಾಡಲಾಗಿದೆ.
ಈ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಮುಗಿದಿದೆ. ಈಗ ಪ್ರಚಾರ ಕಾರ್ಯ ಆರಂಭಿಸಲಾಗಿದೆ. ಟೀಸರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಗಿದೆ.
ಇತ್ತೀಚೆಗೆ ಹಿರಿಯ ಪತ್ರಕರ್ತರಿಂದ ಟೀಸರ್ ಬಿಡುಗಡೆ ಮಾಡಿಸಲಾಯಿತು. ಸಹ ನಿರ್ಮಾಪಕಿ ಜೆ. ಅಂಜಲಿ ಅವರ ಪುತ್ರಿಯರಾದ ಜಯಕೀರ್ತಿ ಮತ್ತು ಜಯಕನ್ನಿಕಾ ಅವರು ಹಾಡನ್ನು ರಿಲೀಸ್ ಮಾಡಿದರು. ರಮೇಶ್ ಕೃಷ್ಣ ಅವರು ‘ಅನರ್ಥ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.
ಕಿರುತೆರೆಯಲ್ಲಿ ರಮೇಶ್ ಕೃಷ್ಣ ಅವರು ಅನುಭವ ಹೊಂದಿದ್ದಾರೆ. ‘ಅರ್ಧ ಸತ್ಯ’ ಸೀರಿಯಲ್ ನಿರ್ದೇಶನಕ್ಕೆ ಅವರು ಪ್ರಶಸ್ತಿ ಪಡೆದಿದ್ದರು. ಬಳಿಕ ‘ಗುಪ್ತಗಾಮಿನಿ’, ‘ಪ್ರೀತಿ ಇಲ್ಲದ ಮೇಲೆ’, ‘ಶಿವ’, ‘ಲಕುಮಿ’, ‘ಕದನ’, ‘ಚುಕ್ಕಿ’, ‘ಗೋಕುಲದಲ್ಲಿ ಸೀತೆ’ ಧಾರಾವಾಹಿಗಳ ತೆರೆಹಿಂದೆ ಕೆಲಸ ಮಾಡಿದ್ದಾರೆ. ‘ಮೆಲ್ಲುಸಿರೇ ಸವಿಗಾನ’ ಸಿನಿಮಾದ ನಿರ್ದೇಶನ ಮಾಡಿದ ಅವರು ಈಗ ‘ಅನರ್ಥ’ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ.
‘ಅನರ್ಥ’ ಚಿತ್ರಕ್ಕೆ ನಿರ್ದೇಶನ ಮಾಡುವುದರ ಜೊತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಕೂಡ ರಮೇಶ್ ಕೃಷ್ಣ ಬರೆದಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಸಿನಿಮಾ ಬಗ್ಗೆ ಮಾತನಾಡಿದರು. ‘ಅವಕಾಶ್ ಮತ್ತು ಆಕೃತಿ ಎನ್ನುವ 2 ಪಾತ್ರಗಳ ಸುತ್ತ ಈ ಸಿನಿಮಾ ಸಾಗುತ್ತದೆ. ಇದರಲ್ಲಿ ಊಹಿಸಲಾಗದ ಟ್ವಿಸ್ಟ್ಗಳು ಇವೆ. ಕ್ಲೈಮಾಕ್ಸ್‌ನಲ್ಲಿ ಹೀಗೂ ಆಗಬಹುದು ಎಂಬ ದೃಶ್ಯ ಇದೆ. ಎಲ್ಲ ಕಮರ್ಷಿಯಲ್ ಅಂಶಗಳು ಈ ಸಿನಿಮಾದಲ್ಲಿವೆ. ಅದರ ಜೊತೆಗೆ ಒಂದು ಅಂಶ ಭಿನ್ನವಾಗಿದೆ. ಅದೇನು ಎಂಬುದನ್ನು ತಿಳಿಯಲು ನೀವು ಸಿನಿಮಾ ನೋಡಬೇಕು’ ಎಂದು ಅವರು ಹೇಳಿದರು.
ನಿರ್ಮಾಪಕ ಶ್ರೀಧರ್ ಎನ್.ಸಿ. ಹೊಸಮನೆ ಅವರು ಅವರು ಈ ಮೊದಲು ಹೀರೋ ಆಗುವ ಕನಸು ಕಂಡಿದ್ದರು. ಬಳಿಕ ಉದ್ಯಮದಲ್ಲಿ ಯಶಸ್ಸು ಕಂಡರು. ಈಗ ಅವರು ‘ತೇಜಸ್ ಸಿನಿ ಕ್ರಿಯೇಶನ್ಸ್’ ಸಂಸ್ಥೆಯ ಮೂಲಕ ನಿರ್ಮಾಪಕರಾಗಿದ್ದಾರೆ. ಮಂಡ್ಯ ರಮೇಶ್ ಅವರ ಬಳಿ ತರಬೇತಿ ಪಡೆದುಕೊಂಡು ಬಂದಿರುವ ವಿಶಾಲ್ ಮಣ್ಣೂರು ಅವರು ಈ ಸಿನಿಮಾಗೆ ಹೀರೋ ಆಗಿದ್ದಾರೆ. ಮೆಡಿಕಲ್ ವಿದ್ಯಾರ್ಥಿನಿ ವಿಹಾನಿ ಅವರು ‘ಅನರ್ಥ’ ಚಿತ್ರಕ್ಕೆ ನಾಯಕಿ. ಈ ಮೊದಲು ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ.