ಮನೆ ರಾಜ್ಯ ಉಮೇಶ್ ಕತ್ತಿ ನಿಧನದ ಹಿನ್ನೆಲೆ 2ನೇ ಹಂತದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ರದ್ದು

ಉಮೇಶ್ ಕತ್ತಿ ನಿಧನದ ಹಿನ್ನೆಲೆ 2ನೇ ಹಂತದ ಗಜಪಡೆಗೆ ಸಾಂಪ್ರದಾಯಿಕ ಪೂಜೆ ರದ್ದು

0

ಮೈಸೂರು(Mysuru): ಅರಣ್ಯ ಸಚಿವ ಉಮೇಶ್ ಕತ್ತಿ ನಿಧನದ ಹಿನ್ನೆಲೆಯಲ್ಲಿ ಇಂದು ಅರಮನೆ ಪ್ರವೇಶ ಮಾಡಬೇಕಾಗಿದ್ದ ಎರಡನೇ ಹಂತದ ಗಜಪಡೆಗೆ ಮಾಡಬೇಕಿದ್ದ ಸಾಂಪ್ರದಾಯಿಕ ಪೂಜೆಯನ್ನು ರದ್ದುಗೊಳಿಸಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಡಿಸಿಎಫ್ ಕರಿಕಾಳನ್, ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಈಗಾಗಲೇ ಅಭಿಮನ್ಯು ನೇತೃತ್ವದ ಮೊದಲ ಹಂತದ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಕಾವೇರಿ, ಚೈತ್ರ ಮತ್ತು ಲಕ್ಷೀ ಆನೆಗಳು ಆಗಸ್ಟ್ 7 ರಂದು ಗಜಪಯಣದ ಮೂಲಕ ಆಗಮಿಸಿ ಅಗಸ್ಟ್ 10 ರಂದು ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಸಾಂಪ್ರದಾಯಿಕ ಪೂಜೆಯೊಂದಿಗೆ ಅರಮನೆ ಪ್ರವೇಶಿಸಿ ತಾಲೀಮು ಆರಂಭಿಸಿವೆ ಎಂದು ಹೇಳಿದರು.

ಇಂದು ಎರಡನೇ ಹಂತದ ಆನೆಗಳು ಅರಮನೆ ಪ್ರವೇಶ ಮಾಡಲಿದ್ದು, ಈ ಆನೆಗಳಿಗೆ ಸಾಂಪ್ರದಾಯಿಕ ಪೂಜೆ ನೆರವೇರಿಸಬೇಕಿತ್ತು. ಆದರೆ ಸಚಿವರ ನಿಧನದ ಹಿನ್ನಲೆಯಲ್ಲಿ ಪೂಜೆ ರದ್ದುಗೊಳಿಸಲಾಗಿದೆ ಎಂದು ತಿಳಿಸಿದರು.

ರಾಂಪುರ ಶಿಬಿರದ 18 ವರ್ಷದ ಅತ್ಯಂತ ಕಿರಿಯ ಆನೆ ಪಾರ್ಥಸಾರಥಿ, ದುಬಾರಿ ಆನೆ ಶಿಬಿರದ ಶ್ರೀರಾಮ ಮತ್ತು ಸುಗ್ರೀವ ಇದರೊಂದಿಗೆ ಗೋಪಿ ಹಾಗೂ ವಿಜಯ ಶಿಬಿರದಿಂದ ಆಗಮಿಸಿದ್ದು, ಅರಮನೆ ಪ್ರವೇಶ ಮಾಡಲಿರುವ ಎರಡನೇ ಹಂತದ ಗಜಪಡೆಯ ಆನೆಗಳಾಗಿವೆ.

ನಾಳೆ ಸಿಡಿಮದ್ದು ತಾಲೀಮು: ಇಂದು ಎರಡನೇ ಹಂತದ ಗಜಪಡೆ ಅರಮನೆಗೆ ಆಗಮಿಸಿದ್ದು, ನಾಳೆ 14 ಆನೆಗಳನ್ನು ಸೇರಿಸಿ ಒಟ್ಟಾಗಿ ಮೊದಲ ಹಂತದ ಸಿಡಿಮದ್ದು ತಾಲೀಮು ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸೆ.9 ರಂದು ಮೊದಲ ಹಂತದಲ್ಲಿ ಆಗಮಿಸಿದ 9 ಗಜಪಡೆ ಹಾಗೂ ಎರಡನೇ ಹಂತದ 5 ಗಜಪಡೆಗಳನ್ನು ಒಟ್ಟಾಗಿ ತೂಕ ಹಾಕಿಸಲಾಗುವುದು ಎಂದು ಡಿಸಿಎಫ್ ಕರಿಕಾಳನ್​​ ಮಾಹಿತಿ ನೀಡಿದರು.