ಅಮರಾವತಿ : ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯ ದ್ವಾರಪುಡಿ ಗ್ರಾಮದಲ್ಲಿ ಭಾನುವಾರ ಸಂಜೆ ಸಂಭವಿಸಿದ ಒಂದು ದುರ್ಘಟನೆಯು ನಾಲ್ವರು ಮಕ್ಕಳ ಅಮೂಲ್ಯ ಜೀವವನ್ನು ಬಲಿ ತೆಗೆದುಕೊಂಡಿದೆ. ಆಟವಾಡುತ್ತಿದ್ದ ನಾಲ್ವರು ಮಕ್ಕಳು ಕಾರಿನೊಳಗೆ ಸಿಲುಕಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ
ಮೃತರಾದ ಮಕ್ಕಳು: ಮಂಗಿ ಉದಯ್ (8), ಬುರ್ಲೆ ಚಾರುಮತಿ (8), ಬುರ್ಲೆ ಚರಿಷ್ಮಾ (6), ಕಂಡಿ ಮನಸ್ವಿನಿ (6) ಎಂದು ತಿಳಿದು ಬಂದಿದೆ.
ಸ್ಥಳೀಯ ವ್ಯಕ್ತಿಯೊಬ್ಬ ತಮ್ಮ ಕಾರನ್ನು ದ್ವಾರಪುಡಿ ಗ್ರಾಮದಲ್ಲಿ ನಿಲ್ಲಿಸಿ ಲಾಕ್ ಮಾಡದೆ ತೆರಳಿದ್ದರು. ಈ ವೇಳೆ ಗ್ರಾಮದಲ್ಲಿ ಮಳೆಯಾಗತೊಡಗಿತು. ಮಳೆಯಿಂದ ತಪ್ಪಿಸಿಕೊಳ್ಳಲು ನಾಲ್ವರು ಮಕ್ಕಳು ಪಕ್ಕದಲ್ಲೇ ನಿಲ್ಲಿಸಿದ್ದ ಕಾರಿನಲ್ಲಿ ಹತ್ತಿದ್ದರು. ಅವರು ಒಳಗೆ ಹೋದ ನಂತರ ಕಾರಿನ ಬಾಗಿಲು ಆಕಸ್ಮಿಕವಾಗಿ ಲಾಕ್ ಆಗಿ ಹೊರಗೆ ಬರಲು ಸಾಧ್ಯವಾಗಲಿಲ್ಲ.
ಮಕ್ಕಳು ಕಾರಿನಲ್ಲಿ ಸಿಲುಕಿಕೊಂಡಿದ್ದು ಗೊತ್ತಾಗದೆ, ಕುಟುಂಬಸ್ಥರು ಮತ್ತು ಗ್ರಾಮಸ್ಥರು ಸುಮಾರು ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿದರು. ಕೊನೆಗೆ ಕಾರಿನತ್ತ ಗಮನಹರಿಸಿದಾಗ, ನಾಲ್ವರು ಮಕ್ಕಳು ಕಾರಿನೊಳಗೆ ಕಾಣಿಸಿಕೊಂಡರು. ಕಾರಿನ ಬಾಗಿಲು ಲಾಕ್ ಆಗಿರುವುದು ಕಂಡುಬಂದ ತಕ್ಷಣವೇ ಕಾರಿನ ಗ್ಲಾಸ್ ಒಡೆದು ಮಕ್ಕಳನ್ನು ಹೊರತೆಗೆದರೂ, ಅವರು ಆಗಲೇ ಉಸಿರುಗಟ್ಟಿ ಮೃತಪಟ್ಟಿದ್ದರು.
ಈ ದುರ್ಘಟನೆಗೆ ಕಾರಣವಾದದ್ದು, ಕಾರು ಮಾಲೀಕರ ನಿರ್ಲಕ್ಷ್ಯವೆಂದು ಹೇಳಬಹುದು. ಕಾರು ಲಾಕ್ ಮಾಡದೇ ಬಿಟ್ಟಿದ್ದು, ಮತ್ತು ಮಕ್ಕಳಿಗೆ ಆಟದ ಸ್ಥಳವಾಗಿ ಅದನ್ನು ಬಳಸಲು ಅವಕಾಶವಾಗಿದ್ದು, ಕೊನೆಗೆ ದುರಂತಕ್ಕೆ ಕಾರಣವಾಯಿತು. ಮಕ್ಕಳ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಹಾಗೂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರು ಲಾಕ್ ಮಾಡದೇ ತೆರಳಿದರೆ ಎಂಥಹ ಅನಾಹುತ ಸಂಭವಿಸುತ್ತದೆ ಎಂಬುದಕ್ಕೆ ಈ ಘಟನೆಯೇ ಪ್ರತ್ಯಕ್ಷ ಉದಾಹರಣೆಯಾಗಿದೆ. ಇದೀಗ ಯಾರದೋ ನಿರ್ಲಕ್ಷ್ಯಕ್ಕೆ ಅಮಾಯಕ ಮಕ್ಕಳು ಬಲಿಯಾಗಿದ್ದಾರೆ.














