ಮನೆ ಕಾನೂನು ಅಂಗನವಾಡಿ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣ : ಧಾರವಾಡ ಉಪನಿರ್ದೇಶಕಿ, ಸಿಡಿಪಿಒ ಅಮಾನತು

ಅಂಗನವಾಡಿ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣ : ಧಾರವಾಡ ಉಪನಿರ್ದೇಶಕಿ, ಸಿಡಿಪಿಒ ಅಮಾನತು

0

ಧಾರವಾಡ/ಹುಬ್ಬಳ್ಳಿ : ಅಂಗನವಾಡಿ ಫಲಾನುಭವಿಗಳಿಗೆ ವಿತರಿಸುವ ಪೌಷ್ಟಿಕ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದಡಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಹುಲಿಗೆಮ್ಮ ಕುಕನೂರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಸಿಡಿಪಿಒ) ಮುತ್ತಣ್ಣ ಸಿ.ಎ ಅವರನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಳ‌ರ್ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿದೆ.

Join Our Whatsapp Group

ಹಳೇ ಹುಬ್ಬಳ್ಳಿಯ ಗಟ್ಟೂರು ಕ್ರಾಸ್ ಬಳಿ ಇರುವ ಆಹಾರ ಗೋದಾಮಿನಲ್ಲಿ ಅಂಗನವಾಡಿ ಫಲಾನುಭವಿಗಳಿಗೆ ವಿತರಿಸುವ ಪೌಷ್ಟಿಕ ಸಾಮಗ್ರಿಗಳಾದ ತೊಗರಿ ಬೇಳೆ, ಹೆಸರು ಕಾಳು, ಬೆಲ್ಲ, ಸಕ್ಕರೆ, ಗೋಧಿಹಿಟ್ಟನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಹೀಗಾಗಿ, ಕರ್ತವ್ಯಲೋಪ ಎಸಗಿರುವ ಉಪ ನಿರ್ದೇಶಕರು ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವಿರುದ್ಧ ಇಲಾಖೆ ಶಿಸ್ತು ಕ್ರಮ ಕೈಗೊಂಡಿದೆ.

ಪೌಷ್ಟಿಕ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ನಿರೂಪಣಾಧಿಕಾರಿಗಳು ಹಾಗೂ ಇತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಅಂಗನವಾಡಿಗೆ ಸರಬರಾಜು ಮಾಡಿರುವ ಸುಮಾರು 4 ಲಕ್ಷ ರೂ. ಮೌಲ್ಯದ ಆಹಾರ ಸಾಮಗ್ರಿಗಳು ಪತ್ತೆಯಾಗಿದ್ದವು. ಸಾಮಗ್ರಿಗಳ ಅಕ್ರಮ ದಾಸ್ತಾನಿಗೆ ಕಾರಣರಾದವರ ಮೇಲೆ ಕ್ರಮಕೈಗೊಳ್ಳಲು ಕಸಬಾಪೇಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಪ್ರಕರಣ ಗಮನಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸುವುದರ ಜೊತೆಗೆ ಪ್ರಕರಣದ ಬಗ್ಗೆ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.

ಜಿಲ್ಲಾ ಪಂಚಾಯತ್​ನಿಂದ ತನಿಖಾ ತಂಡ ರಚನೆ : ಪ್ರಕರಣದ ತನಿಖೆಗೆ ಜಿಲ್ಲಾ ಪಂಚಾಯತ್​​ನಿಂದ ತನಿಖಾ ತಂಡ ರಚನೆ ಮಾಡಲಾಗಿದೆ ಎಂದು ಧಾರವಾಡ ಜಿಪಂ ಸಿಇಒ ಭುವನೇಶ ಪಾಟೀಲ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಹುಬ್ಬಳ್ಳಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಇದಕ್ಕಾಗಿ ಜಿ.ಪಂ.ನಿಂದ ತನಿಖಾ ತಂಡ ರಚನೆ ಮಾಡುತ್ತಿದ್ದೇವೆ. ಇವತ್ತು ತನಿಖಾ ತಂಡ ರಚನೆಯ ಆದೇಶ ಆಗಲಿದೆ. ಈಗಾಗಲೇ 18 ಅಂಗನವಾಡಿ ಕಾರ್ಯಕರ್ತರು ಸೇರಿ ಕೆಲವರ ಬಂಧನವೂ ಆಗಿದೆ. ಸರ್ಕಾರದಿಂದಲೂ ಆದೇಶಗಳು ಬರುತ್ತಿವೆ. ಆ ಆದೇಶಗಳಿಗೆ ತಕ್ಕಂತೆ ಕ್ರಮ ಕೈಗೊಳ್ಳಲಾಗುವುದು. ಸಂಬಂಧಪಟ್ಟವರ ಅಮಾನತು ಸಹ ಆಗಿದೆ ಎಂದು ತಿಳಿಸಿದರು.

ಏನೆಲ್ಲಾ ಅಕ್ರಮ ಆಗಿದೆ ಎನ್ನುವುದರ ಬಗ್ಗೆಯೇ ಈಗ ತನಿಖೆ ಆಗಬೇಕಿದೆ. ಮೇಲ್ನೋಟಕ್ಕೆ ಕೆಲವರು ಭಾಗಿಯಾಗಿರೋದು ಕಂಡು ಬಂದಿದೆ. ಅಂಗನವಾಡಿ ಕಾರ್ಯಕರ್ತರು, ಸೂಪರವೈಸರ್​​ಗಳು, ಸಿಡಿಪಿಒ ಭಾಗಿಯಾಗಿದ್ದಾರೆಯೇ ಎಂಬ ಕುರಿತು ತನಿಖಾ ತಂಡ ಎಲ್ಲ ತನಿಖೆ ಮಾಡಲಿದೆ. ಪೊಲೀಸ್ ಪ್ರಕರಣವೂ ದಾಖಲಾಗಿದ್ದು, ಕೆಲವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಅಂತಹವರನ್ನು ಅಮಾನತು ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.