ಬೆಂಗಳೂರು: ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ನೇತೃತ್ವದೊಂದಿಗೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಶಿಕ್ಷಕರ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ನಡೆಸುತ್ತಿದ್ದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದಾರೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಅವರು ಪ್ರತಿಭಟನಾ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಮನವಿ ಸ್ವೀಕರಿಸಿದ್ದರು.
ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು. ಸದ್ಯ ಪ್ರತಿಭಟನೆ ಕೈಬಿಡಿ ಎಂದು ಕೋರಿದ್ದರು.
ಅದಕ್ಕೆ ಒಪ್ಪದ ಪ್ರತಿಭಟನಕಾರರು, ಮುಖ್ಯಮಂತ್ರಿ ಅವರು ಪ್ರತಿಭಟನಾ ಸ್ಥಳಕ್ಕೆ ಬರಬೇಕು. ನಮ್ಮ ಬೇಡಿಕೆಗಳನ್ನು ಆಲಿಸಿ, ಅವುಗಳನ್ನು ಈಡೇರಿಸಲು ಲಿಖಿತ ಭರವಸೆ ನೀಡಬೇಕು. ಅಲ್ಲಿಯವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದರು.
ಈ ಪ್ರತಿಭಟನೆ ಶುಕ್ರವಾರ ಮೂರನೇ ದಿನ ಪೂರೈಸಿತು. ಮತ್ತು ಉದ್ಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಾಲ್ಗೊಂಡಿದ್ದರು.
ಸ್ಥಳಕ್ಕೆ ಬಂದ ಪೊಲೀಸರು, ಪ್ರತಿಭಟನೆಗೆ ನೀಡಿದ್ದ ಕಾಲಾವಕಾಶ ಮುಗಿದಿದೆ. ಸ್ಥಳದಿಂದ ಹೋಗುವಂತೆ ಕೋರಿದರು. ಅದಕ್ಕೆ ಪ್ರತಿಭಟನಕಾರರು ಒಪ್ಪಲಿಲ್ಲ. ಬಳಿಕ, ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಪೊಲೀಸರು ವಶಕ್ಕೆ ಪಡೆದು, ಬಸ್’ಗಳಲ್ಲಿ ಕರೆದೊಯ್ದಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು, ಉದ್ಯಾನದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು.