ಮನೆ ಅಂತಾರಾಷ್ಟ್ರೀಯ ಖಮೇನಿ ವಿರುದ್ಧ ಸಿಟ್ಟು – 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ..!

ಖಮೇನಿ ವಿರುದ್ಧ ಸಿಟ್ಟು – 350ಕ್ಕೂ ಹೆಚ್ಚು ಮಸೀದಿಗಳಿಗೆ ಬೆಂಕಿ..!

0

ಟೆಹರಾನ್‌ : ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಸಣ್ಣಮಟ್ಟದಲ್ಲಿ ಆರಂಭವಾದ ಪ್ರತಿಭಟನೆ ತೀವ್ರಗೊಂಡಿದ್ದು ಇರಾನ್‌ ಜನರು ಈಗ ಮಸೀದಿಗೆ ಬೆಂಕಿ ಹಾಕಿದ್ದಾರೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಖಮೇನಿ ಆಡಳಿತದ ವಿರುದ್ಧ ತಿರುಗಿ ಬಿದ್ದ ಪ್ರತಿಭಟನಕಾರರು ಸುಮಾರು 350ಕ್ಕೂ ಹೆಚ್ಚು ಮಸೀದಿ ಬೆಂಕಿ ಹಚ್ಚಿದ್ದಾರೆ. ಇರಾನಿನ ವಿದೇಶಾಂಗ ಸಚಿವ ಅರಘ್ಚಿ ಪ್ರತಿಕ್ರಿಯಿಸಿ, ಪ್ರತಿಭಟನಾಕಾರರು ಮಸೀದಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ. ಇದು ಆಘಾತಕಾರಿ ಮತ್ತು ವಿಚಿತ್ರ ಬೆಳವಣಿಗೆ. ಯಾವುದೇ ಇರಾನ್‌ ಪ್ರಜೆ ಪ್ರಾರ್ಥನೆ ಮಾಡುವ ಸ್ಥಳಕ್ಕೆ ಬೆಂಕಿ ಹಚ್ಚುವುದಿಲ್ಲ. ಆದರೆ ಪ್ರತಿಭಟನಕಾರರು 350 ಮಸೀದಿಗಳನ್ನು ಸುಟ್ಟಿದ್ದಾರೆ ಎಂದು ಹೇಳಿದ್ದಾರೆ.

ಖಮೇನಿ ಆಡಳಿತ ವಿದ್ಯುತ್ ಕಡಿತ, ಇಂಟರ್ನೆಟ್ ಕಡಿತ ಸೇರಿದಂತೆ ಪ್ರತಿಭಟನೆಗಳನ್ನು ಹತ್ತಿಕ್ಕಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಿದರೂ ಪ್ರತಿಭಟನಾಕಾರರು ಹಿಂದೆ ಸರಿಯುತ್ತಿಲ್ಲ. ರಾಜಧಾನಿ ಟೆಹರಾನ್, ಮಶಾದ್ ಸೇರಿದಂತೆ ದೇಶದ ಎಲ್ಲಾ 31 ಪ್ರಾಂತ್ಯದಲ್ಲೂ ಪ್ರತಿಭಟನೆಗಳು ನಡೆಯುತ್ತಿದ್ದು, 100ಕ್ಕೂ ಹೆಚ್ಚಿನ ನಗರಗಳಿಗೆ ಹಬ್ಬಿದೆ. ಮುಲ್ಲಾಗಳೇ ದೇಶಬಿಟ್ಟು ತೊಲಗಿ ಎಂದು ಜನರು ಘೋಷಣೆ ಕೂಗಿ ಟೆಹರಾನ್‌ನಲ್ಲಿರುವ ಸರ್ಕಾರಿ ಕಚೇರಿಗೆ ಬೆಂಕಿ ಹಾಕಿ ಆಕ್ರೋಶ ಹೊರಹಾಕಿದ್ದಾರೆ. ಇಸ್ಲಾಮಿಕ್ ಗಣರಾಜ್ಯದ 47 ವರ್ಷಗಳ ಇತಿಹಾಸದಲ್ಲಿ ಅತಿ ದೊಡ್ಡ ಆಡಳಿತ ವಿರೋಧಿ ಪ್ರತಿಭಟನೆ ಇದಾಗಿದೆ.

ಪ್ರಮುಖ ನಗರಗಳಲ್ಲಿ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚುವ ಮೂಲಕ ಪ್ರತಿಭಟನೆಗೆ ಸಾಥ್‌ ನೀಡುತ್ತಿದ್ದಾರೆ. ಬೆಲೆ ಏರಿಕೆ, ಉದ್ಯೋಗಗಳು ಮತ್ತು ಜೀವನ ವೆಚ್ಚಗಳ ಏರಿಕೆ, ಅತಿಯಾದ ಧಾರ್ಮಿಕತೆನ್ನು ಖಂಡಿಸಿ ಇರಾನ್‌ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಖಮೇನಿ ಆಡಳಿತವನ್ನು ಕಿತ್ತೊಗೆಯುವುದೇ ತಮ್ಮ ಗುರಿ ಎಂದು ಘೋಷಿಸಿದ್ದಾರೆ. ನೇಪಾಳ, ಬಾಂಗ್ಲಾದಂತೆಯೇ ಇಲ್ಲಿಯೂ ಸರ್ಕಾರ ಪತನಗೊಳ್ಳುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಪ್ರತಿಭಟನೆಯನ್ನು ಹತ್ತಿಕ್ಕಲು ಖಮೇನಿ ಬಹಳಷ್ಟು ಪ್ರಯತ್ನ ನಡೆಸುತ್ತಿದ್ದಾರೆ. ಒಂದು ವೇಳೆ ಪ್ರತಿಭಟನಾಕಾರರು ಮೇಲುಗೈ ಸಾಧಿಸಿದರೆ ರಷ್ಯಾಗೆ ಪಲಾಯನ ಮಾಡಲು ಖಮೇನಿ ಸಿದ್ಧತೆ ನಡೆಸಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.