ಹುಬ್ಬಳ್ಳಿ: ನಗರದಲ್ಲಿ ನಡೆದ ಅಂಜಲಿ ಅಂಬಿಗೇರ ಹತ್ಯೆಗೆ ಸಂಬಂಧಿಸಿದಂತೆ ಆರೋಪಿ ಗಿರೀಶ ಸಾವಂತನನ್ನು ಸಿಐಡಿ ಅಧಿಕಾರಿಗಳು ಬುಧವಾರ ತಮ್ಮ ವಶಕ್ಕೆ ಪಡೆದರು.
ದಾವಣಗೆರೆಯಲ್ಲಿ ಚಲಿಸುತ್ತಿದ್ದ ರೈಲಿನಿಂದ ಜಿಗಿದು, ಕೆಳಗೆ ಬಿದ್ದಿದ್ದರಿಂದ ಗಾಯಗೊಂಡಿದ್ದ ಗಿರೀಶಗೆ ನಗರದ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಬಂದು ವಶಕ್ಕೆ ತೆಗೆದುಕೊಂಡ ಸಿಐಡಿ ಅಧಿಕಾರಿಗಳು, ಬೆಂಡಿಗೇರಿ ಪೊಲೀಸ್ ಠಾಣೆಗೆ ಕರೆದೊಯ್ದು ಸುದೀರ್ಘ ವಿಚಾರಣೆ ನಡೆಸಿದರು. ಆತನ ತಾಯಿ ಸವಿತಾ ಅವರನ್ನೂ ವಿಚಾರಣೆ ನಡೆಸಿ, ಹಳೆಯ ಪ್ರಕರಣಗಳ ಬಗ್ಗೆ ಮಾಹಿತಿ ಕಲೆ ಹಾಕಿದರು.
ಘಟನಾ ಸ್ಥಳ ಪರಿಶೀಲನೆ: ಸಿಐಡಿ ಅಧಿಕಾರಿಗಳ ಇನ್ನೊಂದು ತಂಡ ಅಂಜಲಿ ಅಂಬಿಗೇರ ಅವರ ಮನೆಗೆ ಭೇಟಿ ನೀಡಿ, ಪರಿಶೀಲಿಸಿತು. ಅಂಜಲಿ ಅಜ್ಜಿಯಿಂದ ಮಾಹಿತಿ ಪಡೆಯಿತು.
ಸಿಐಡಿ ಎಸ್.ಪಿ. ವೆಂಕಟೇಶ್ ನೇತೃತ್ವದ ಡಿವೈಎಸ್ ಪಿ ದರ್ಜೆ ಅಧಿಕಾರಿ ಸೇರಿ ಒಟ್ಟು ಎಂಟು ಮಂದಿ ಅಧಿಕಾರಿಗಳ ತಂಡ ಮಂಗಳವಾರ ಹುಬ್ಬಳ್ಳಿಗೆ ಬಂದು, ಬೆಂಡಿಗೇರಿ ಪೊಲೀಸರಿಂದ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪಡೆದಿತ್ತು. ಬುಧವಾರ ಬೆಳಿಗ್ಗೆ ನವನಗರದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಕಚೇರಿಗೆ ತೆರಳಿ, ಕಮಿಷನರ್ ರೇಣುಕಾ ಸುಕುಮಾರ್ ಅವರೊಂದಿಗೆ ಪ್ರಕರಣದ ಬಗ್ಗೆ ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ.
ಈ ಪ್ರಕರಣ ಸಂಬಂಧ ಅಮಾನತುಗೊಂಡಿರುವ ಅಧಿಕಾರಿಗಳ ಬಗ್ಗೆಯೂ ತನಿಖೆ ನಡೆಸಿದ್ದಾರೆ.
ಅನುಚಿತ ವರ್ತನೆ: ಕಿಮ್ಸ್ ಆಸ್ಪತ್ರೆಯಲ್ಲಿ 5 ದಿನಗಳಿಂದ ಗಿರೀಶ ಚಿಕಿತ್ಸೆ ಪಡೆಯುತ್ತಿದ್ದ. ಮಂಗಳವಾರ ಕೊಠಡಿ ಸ್ವಚ್ಛಗೊಳಿಸುವ ಮಹಿಳಾ ಸಿಬ್ಬಂದಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದ. ಹೀಗಾಗಿ, ಕೊಠಡಿಗೆ ಎಂಟು ಮಂದಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.