ಹುಬ್ಬಳ್ಳಿ: ಮೇ. 15ರಂದು ಹುಬ್ಬಳ್ಳಿಯ ವೀರಾಪೂರ ಓಣಿಯಲ್ಲಿರುವ ಅಂಜಲಿ ಮನೆಗೆ ನುಗ್ಗಿ ಗಿರೀಶ್ ಅಲಿಯಾಸ್ ವಿಶ್ವ ಎಂಬಾತ ಕೊಲೆ ಮಾಡಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಿಐಡಿ ಅಧಿಕಾರಿಗಳು ತನಿಖೆ ನಡೆಸಿ 494 ಪುಟಗಳ ಚಾರ್ಜ್ಶೀಟ್ನ್ನು ಹುಬ್ಬಳ್ಳಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ್ದಾರೆ.
ಇದರಲ್ಲಿ ಮುಖ್ಯವಾಗಿ ಸಿಸಿಟಿವಿ, ಪ್ರತ್ಯಕ್ಷ ಸಾಕ್ಷಿ, ಹಂತಕನ ತಾಯಿ, ಗಿರೀಶ್ ಕೆಲಸ ಮಾಡ್ತಿದ್ದ ಹೊಟೆಲ್ ಸಿಬ್ಬಂದಿ ಸೇರಿ 85 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ. ಗಿರೀಶ್ನಿಂದ ಅಂಜಲಿ ದೂರವಾಗಿದ್ದಕ್ಕೆ ಕೊಲೆ ಎಂದು ಉಲ್ಲೇಖ ಮಾಡಲಾಗಿದೆ.
ಆರೋಪಿ ಗಿರೀಶ್ ಮೈಸೂರಿನ ಮಹಾರಾಜ ಹೋಟೆಲ್ ಆವರಣದ ಎಂಎಸ್ಸಿ ಪಬ್ ಆ್ಯಂಡ್ ಬಾರ್ನಲ್ಲಿ ಕೆಲಸ ಮಾಡುತ್ತಿದ್ದ. ಗಿರೀಶ್ ಕೆಲಸ ಮಾಡುವ ಸಮಯದಲ್ಲಿಯೇ 3 ರಿಂದ 4 ಬಾರಿ ಅಂಜಲಿ, ಗಿರೀಶ್ ಭೇಟಿಗೆ ತೆರಳಿದ್ದರು. 2024 ರ ಎಪ್ರೀಲ್ನಲ್ಲಿ ಇಬ್ಬರ ನಡುವೆ ಮನಸ್ತಾಪವಾಗಿದೆ. ಈ ವೇಳೆ ಗಿರೀಶ್ ಕರೆಯನ್ನು ಅಂಜಲಿ ಸ್ವೀಕರಿಸಿಲ್ಲ. ಇದಲ್ಲದೆ ಅಂಜಲಿ ಗಿರೀಶ್ ನಂಬರ್ ಬ್ಲಾಕ್ ಮಾಡಿದ್ದಳು. ಹೀಗಾಗಿ ಅಂಜಲಿ ಮನೆಗೆ ಬಂದು ಕೊಲೆ ಮಾಡಿದ್ದಾನೆಂದು ದೋಷಾರೋಪ ಪಟ್ಟಿಯಲ್ಲಿ ನಮೂದಿಸಲಾಗಿದೆ.
ಮೈಸೂರಿನಿಂದಲೇ ಚಾಕು ತಂದಿದ್ದ ಹಂತಕ ಗಿರೀಶ್, ಮೈಸೂರಿನ ಬಸ್ ನಿಲ್ದಾಣದ ಪಕ್ಕ ಗುರುತು ಸಿಗಬಾರದು ಎನ್ನುವ ಕಾರಣಕ್ಕೆ ಮಾಸ್ಕ್ ಖರೀದಿ ಮಾಡಿದ್ದ. ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಗಿರೀಶ್, ಮೇ. 17 ರಂದು ಮೈಸೂರಿನಿಂದ ಬೆಳಗಾವಿಗೆ ವಿಶ್ವ ಮಾನವ ರೈಲಿನಲ್ಲಿ ಪ್ರಯಾಣ ಮಾಡುವಾಗ ರೈಲ್ವೆ ಪೊಲೀಸರು ಕೈಗೆ ಸಿಕ್ಕಿ ಬಿದ್ದಿದ್ದ. ರೈಲಿನಲ್ಲಿ ಮಹಿಳಾ ಪ್ರಯಾಣಿಕರ ಜೊತೆ ಕಿರಿಕ್ ಮಾಡಿಕೊಂಡು, ದಾವಣಗೆರೆ ಬಳಿ ರೈಲಿನಿಂದ ಬಿದ್ದು ಗಾಯ ಮಾಡಿಕೊಂಡಿದ್ದ. ಇನ್ನು ಅಂಜಲಿ ಕೊಲೆ ಪ್ರಕರಣದ ಹಿನ್ನಲೆ ನಾಲ್ಕು ಜನ ಪೊಲೀಸ್ ಅಧಿಕಾರಿಗಳ ತಲೆದಂಡವೂ ಆಗಿತ್ತು. ಇದೀಗ ಕೊಲೆ ನಡೆದ 98 ದಿನಗಳ ಬಳಿಕ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.