ಡೆಹ್ರಾಡೂನ್: ದೇಶದ ಗಮನ ಸೆಳೆದಿದ್ದ ಹೃಷಿಕೇಶದ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದಲ್ಲಿ ಕೊನೆಗೂ ನ್ಯಾಯ ದೊರೆತಿದೆ. 2022ರಲ್ಲಿ 19 ವರ್ಷದ ಯುವತಿ ಅಂಕಿತಾ ಭಂಡಾರಿ ಅವರನ್ನು ಹತ್ಯೆ ಮಾಡಿದ ಆರೋಪದಲ್ಲಿ ಉತ್ತರಾಖಂಡದ ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಇಬ್ಬರು ಸಹಚರರಿಗೆ ಕೋಟ್‌ದ್ವಾರದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಇಂದು (ಮೇ 30) ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿದ ಮೂವರು – ಪುಲ್ಕಿತ್ ಆರ್ಯ, ಸೌರಭ್ ಭಾಸ್ಕರ್ ಮತ್ತು ಅಂಕಿತ್ ಗುಪ್ತಾ – ಪ್ರತಿಯೊಬ್ಬರೂ ಅಂಕಿತಾ ಭಂಡಾರಿ ಅವರ ಹತ್ಯೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದರೆಂದು ಸಾಬೀತಾಗಿದೆ. ನ್ಯಾಯಾಲಯವು ಶಿಕ್ಷೆಯ ಜೊತೆಗೆ ಅಂಕಿತಾ ಅವರ ಕುಟುಂಬಕ್ಕೆ ತಲಾ ₹4 ಲಕ್ಷ ಪರಿಹಾರ ನೀಡುವಂತೆ ಆದೇಶ ನೀಡಿದೆ. ಪ್ರಕರಣದ ವಕೀಲ ಅಜಯ್ ಪಂತ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನ್ಯಾಯಾಲಯದ ಈ ತೀರ್ಪು ಅಂಕಿತಾ ಅವರ ಕುಟುಂಬಕ್ಕೆ ತಾತ್ಕಾಲಿಕವಾಗಿ ನಿರಂತರ ನೋವಿಗೆ ಸಾಂತ್ವನ ನೀಡಬಹುದೆಂದು ಅಭಿಪ್ರಾಯಿಸಿದ್ದಾರೆ.
ಘಟನೆ ಹಿನ್ನೆಲೆ: ಪೌರಿ ಜಿಲ್ಲೆಯ ನಿವಾಸಿಯಾಗಿದ್ದ ಅಂಕಿತಾ ಭಂಡಾರಿ ಹೃಷಿಕೇಶದ “ವನಂತರಾ ರೆಸಾರ್ಟ್”ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಅಲ್ಲಿ, ರೆಸಾರ್ಟ್ ಮಾಲೀಕ ಪುಲ್ಕಿತ್ ಆರ್ಯ ಮತ್ತು ಸಹಚರರು ಅಂಕಿತಾ ಮೇಲೆ ವಿಐಪಿ ಅತಿಥಿಗಳಿಗೆ “ಹೆಚ್ಚುವರಿ ಸೇವೆ” ಒದಗಿಸಲು ಒತ್ತಡ ಹಾಕುತ್ತಿದ್ದರು. ಇದನ್ನು ಅಂಕಿತಾ ವಿರೋಧಿಸಿದ್ದ ಕಾರಣದಿಂದ ಕೋಪಗೊಂಡ ಅವರು ಸೆಪ್ಟೆಂಬರ್ 18, 2022ರಂದು ಅಂಕಿತಾ ಅವರನ್ನು ಚಿಲ್ಲಾ ಬ್ಯಾರೇಜ್‌ಗೆ ತಳ್ಳಿ ಕೊಂದಿದ್ದಾರೆ ಎಂಬ ಆರೋಪ ಸಾಬೀತಾಗಿದೆ.
ಅಂಕಿತಾ ಹತ್ಯೆಯಾದ ನಂತರ ಆಕೆ 6 ದಿನಗಳ ಕಾಲ ಕಾಣೆಯಾಗಿದ್ದು, ಸೆಪ್ಟೆಂಬರ್ 24ರಂದು ಆಕೆಯ ಶವ ಋಷಿಕೇಶದ ಚಿಲ್ಲಾ ಕಾಲುವೆಯಲ್ಲಿ ಪತ್ತೆಯಾಯಿತು. ಆರಂಭದಲ್ಲಿ ಪ್ರಕರಣದ ತನಿಖೆಯನ್ನು ಉಪ ಪೊಲೀಸ್ ಮಹಾನಿರ್ದೇಶಕಿ ಪಿ. ರೇಣುಕಾ ದೇವಿ ನೇತೃತ್ವದ ವಿಶೇಷ ತನಿಖಾ ತಂಡ (ಎಸ್‌ಐಟಿ) ನಡೆಸಿತು.
ಮುಖ್ಯ ಆರೋಪಿ ಪುಲ್ಕಿತ್ ಆರ್ಯ, ಬಿಜೆಪಿಯ ಮಾಜಿ ನಾಯಕ ವಿನೋದ್ ಆರ್ಯ ಪುತ್ರನಾಗಿದ್ದಾನೆ. ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಈ ಸಂಬಂಧ ಉಂಟಾದ ಸಾರ್ವಜನಿಕ ಆಕ್ರೋಶ, ಸಾಮಾಜಿಕ ಮಾಧ್ಯಮದ ಒತ್ತಡ ಮತ್ತು ಹತ್ಯೆಯ ಜೊತೆ ಸರ್ಕಾರ ಹಾಗೂ ನ್ಯಾಯಾಂಗ ವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಪರಿಸ್ಥಿತಿಗೆ ತಂದು ನಿಲ್ಲಿಸಿತು.














