ಉತ್ತರಾಖಂಡ್(Uttarakhand): ರೆಸಾರ್ಟ್ ರಿಷೆಪ್ಸನಿಸ್ಟ್ ಆಗಿದ್ದ ಯುವತಿಯ ಹತ್ಯೆ ಪ್ರಕರಣ ಸಂಬಂಧ ಬಂಧಿತ ಆರೋಪಿ, ಬಿಜೆಪಿ ನಾಯಕನ ಮಗನ ಒಡೆತನದ ರೆಸಾರ್ಟ್ ಅನ್ನು ಜೆಸಿಬಿ ಮೂಲಕ ನೆಲಸಮಗೊಳಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ಬಿಜೆಪಿ ನಾಯಕ ವಿನೋದ್ ಆರ್ಯ ಪುತ್ರ ಪುಳಕಿತ್ ಆರ್ಯನಿಗೆ ಸೇರಿದ ವನತಾರಾ ರೆಸಾರ್ಟ್ ಅನ್ನು ಧ್ವಂಸಗೊಳಿಸುವಂತೆ ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಆದೇಶ ನೀಡಿದ್ದಾರೆ.
ನಂತರ ರೆಸಾರ್ಟ್ ಅನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿಯ ಸ್ಪೆಷಲ್ ಪ್ರಿನ್ಸಿಪಲ್ ಸೆಕ್ರೆಟರಿ ಅಭಿನವ್ ಕುಮಾರ್ ತಿಳಿಸಿದ್ದಾರೆ.
ಆರೋಪಿಗಳಾದ ಪುಳಕಿತ್ ಆರ್ಯ, ರೆಸಾರ್ಟ್ ಮ್ಯಾನೇಜರ್ ಸೌರಭ್ ಭಾಸ್ಕರ್ ಮತ್ತು ಸಹಾಯಕ ಮ್ಯಾನೇಜರ್ ಅಂಕಿತ್ ಗುಪ್ತಾಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಅಂಕಿತಾ ಕೊಲೆ ಪ್ರಕರಣದ ತನಿಖೆ ನಡೆಸಲು ಎಸ್ ಐಟಿ (ವಿಶೇಷ ತನಿಖಾ ದಳ) ರಚಿಸಲಾಗುವುದು ಎಂದು ಸಿಎಂ ಪುಷ್ಕರ್ ಸಿಂಗ್ ಟ್ವೀಟ್ ಮಾಡಿದ್ದು, ಡೆಪ್ಯುಟಿ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ರೇಣುಕಾ ದೇವಿ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ತಿಳಿಸಿದ್ದಾರೆ.















