ನವದೆಹಲಿ:ರಾಜ್ಯದ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯನ್ನು ನವೆಂಬರ್ 13ರಂದು ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ನವೆಂಬರ್ 23ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದ್ದಾರೆ.
ಅಕ್ಟೋಬರ್ 18ರಂದು ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು. ಅ.25ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ.ಅ.28ರಂದು ನಾಮಪತ್ರ ಪರಿಶೀಲನೆ ನಡೆಸಲಾಗುವುದು.ಅ.30ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಸಂಸದರಾದ ಬಸವರಾಜ ಬೊಮ್ಮಾಯಿ ಮತ್ತು ಇ.ವಿ.ತುಕಾರಾಂ ಅವರುಗಳು ಲೋಕಸಭೆಗೆ ಆಯ್ಕೆಯಾದ ಹಿನ್ನಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣ ತೆರವಾದ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.
ನೀತಿ ಸಂಹಿತೆ ಮಂಗಳವಾರ ದಿಂದಲೇ ಜಾರಿಯಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ಮತ್ತು ಎನ್‍ಡಿಎ ನಡುವೆ ಭಾರೀ ಜಿದ್ದಾಜಿದ್ದಿ ಏರ್ಪಡುವ ಸಂಭವವಿದೆ. ಲೋಕಸಭೆ ಚುನಾವಣೆ ನಂತರ ನಡೆಯುತ್ತಿರುವ ಉಪಸಮರ ಇದಾಗಿರುವುದರಿಂದ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವ ಉಮೇದಿನಲ್ಲಿದೆ.ಹೀಗಾಗಿಯೇ ಈಗಾಗಲೇ ಚನ್ನಪಟ್ಟಣ ಮತ್ತು ಸಂಡೂರಿಗೆ ಭರಾಪೂರ ಕೊಡುಗೆಗಳನ್ನು ನೀಡಿದೆ.