ಮನೆ ರಾಜ್ಯ ಸೆ.4 ರ ಸಭೆ ಬಳಿಕ ಬರ ತಾಲ್ಲೂಕುಗಳ ಘೋಷಣೆ: ಸಿಎಂ ಸಿದ್ದರಾಮಯ್ಯ

ಸೆ.4 ರ ಸಭೆ ಬಳಿಕ ಬರ ತಾಲ್ಲೂಕುಗಳ ಘೋಷಣೆ: ಸಿಎಂ ಸಿದ್ದರಾಮಯ್ಯ

0

ವಿಜಯಪುರ: ‌ಜಿಲ್ಲೆಯ ನಿಡಗುಂದಿ ತಾಲೂಕಿನ ಆಲಮಟ್ಟಿ ಗ್ರಾಮದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಲಾಲ್​ ಬಹದ್ದೂರ್ ಶಾಸ್ತ್ರಿ ಆಣೆಕಟ್ಟಿನ ಹಿನ್ನೀರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಸೆ.02) ಗಂಗಾ ಪೂಜೆ ನರೆವೇರಿಸಿ, ಬಾಗಿನ ಅರ್ಪಿಸಿದರು.

ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಇಂದು‌ ನಾನು, ನೀರಾವರಿ ಸಚಿವ ಡಿಕೆ ಶಿವಕುಮಾರ್​ ಹಾಗೂ ಇತರ ಸಚಿವರು, ಸಂಸದರು ಮತ್ತು ಶಾಸಕರು ಕೃಷ್ಣೆಗೆ ಗಂಗಾಪೂಜೆ ನೆರವೇರಿಸಿ, ಬಾಗಿನ ಅರ್ಪಣೆ ಮಾಡಿದ್ದೇವೆ. ಡ್ಯಾಂ 519.60 ಮೀಟರ್ ಇದ್ದು, 519.55 ಮೀಟರ್ ನೀರು ಸಂಗ್ರಹವಿದೆ ಎಂದರು.

ರಾಜ್ಯದಲ್ಲಿ ಮಳೆ‌ ವಾಡಿಕೆಗಿಂತ ಕಡಿಮೆಯಾಗಿದೆ. ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ರಾಜ್ಯದ ಬರ ಕುರಿತು ಚರ್ಚೆ ಮಾಡಲಾಗಿದೆ. ಜಂಟಿ‌ ಸರ್ವೆ ಮಾಡಲಾಗಿದೆ. 113 ತಾಲೂಗಳಲ್ಲಿ ಬರವಿದೆ. ಈ ಬಗ್ಗೆ ಸಪ್ಟೆಂಬರ್ 4 ರಂದು ಸಭೆ ನಡೆಯಲಿದೆ. ಸಭೆ ಬಳಿಕ ಎಷ್ಟು ತಾಲೂಕುಗಳಲ್ಲಿ ಬರ ಇದೆ ಎಂದು‌ ಘೋಷಣೆ ಮಾಡಲಾಗುತ್ತದೆ ಎಂದು ಹೇಳಿದರು.

ಬರ ವಿಚರಾದಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ‌ ಸಲ್ಲಿಕೆ ಮಾಡಿದ್ದೇನೆ. ಎನ್ ​ಡಿಆರ್​ ಎಫ್​ ನಿಮಯ‌ದ ಪ್ರಕಾರ ಬರ ಪರಿಹಾರ ಸಿಗಲಿದೆ. ಎನ್​ ಡಿಆರ್ ​ಎಫ್ ನಿಯಮ ಬದಲಾವಣೆಗೆ ಕೇಂದ್ರಕ್ಕೆ ಪತ್ರ ಬರೆದಿದ್ದೇನೆ. ನೀರಾವರಿಗಾಗಿ ಬಜೆಟ್‌ ನಲ್ಲಿ 21000 ಕೋಟಿ ರೂ. ಮೀಸಲು ‌ಇಡಲಾಗಿದೆ. ಭದ್ರಾ ಯೋಜನೆಗೆ 5300 ಕೋಟಿ ರೂ. ಕೇಂದ್ರದಿಂದ ಬರಬೇಕು. ಆದರೆ ಕೇಂದ್ರ ಸರ್ಕಾರ ಈವರೆಗೂ ಹಣ ನೀಡಿಲ್ಲ. ಯುಕೆಪಿಗೆ 1200 ಕೋಟಿ ಮಾತ್ರ ಇಡಲಾಗಿದೆ. ಇನ್ನೂ ಹೆಚ್ಚಿನ ಮೊತ್ತ ನೀಡಲಾಗುತ್ತದೆ ಎಂದು ತಿಳಿಸಿದರು.

ಕೃಷ್ಣಾನದಿ ಜಲ‌‌ವಿವಾದ ಕುರಿತು ತೆಲಂಗಾಣ, ಆಂದ್ರ ಕ್ಯಾತೆ ತೆಗೆದಿದೆ. ಇದೇ‌ ನೆಪದಿಂದ ಗೆಜೆಟ್ ನೋಟಿಫಿಕೇಶನ್ ‌ಮಾಡಿಲ್ಲ. ಹೀಗಾಗಿ ಮೂರನೇ ಹಂತದ ಯೋಜನೆಗೆ ಅಡ್ಡಿಯಾಗಿದೆ. ಇನ್ನು ಕಾವೇರಿ ನದಿ ನೀರು ಬಿಡುಗಡೆ ವಿಚಾರವಾಗಿ ಮಾತನಾಡಿ, 5000 ಕ್ಯೂಸೆಕ್ ನೀರು ಬಿಡಲು ಆದೇಶ ಆಗಿದೆ. ತಮಿಳುನಾಡು 24000 ಕ್ಯೂಸೆಕ್ ಬಿಡಲು ಒತ್ತಾಯಿಸಿತ್ತು. ಹಾಗೇ ಮಹಾದಾಯಿ, ಮೇಕೆದಾಟು‌ ಯೋಜನೆ ಕಾಮಗಾರಿ ಶೀಘ್ರವೇ ಆರಂಭಿಸುತ್ತೇವೆ ಎಂದು ಭರವಸೆ ನೀಡಿದರು.