ಮನೆ ಅಂತಾರಾಷ್ಟ್ರೀಯ ಮತ್ತೊಮ್ಮೆ 5.6 ತೀವ್ರತೆಯ ಭೂಕಂಪ: ಟರ್ಕಿ, ಸಿರಿಯಾದಲ್ಲಿ 4300ಕ್ಕೂ ಹೆಚ್ಚು ಮಂದಿ ಸಾವು

ಮತ್ತೊಮ್ಮೆ 5.6 ತೀವ್ರತೆಯ ಭೂಕಂಪ: ಟರ್ಕಿ, ಸಿರಿಯಾದಲ್ಲಿ 4300ಕ್ಕೂ ಹೆಚ್ಚು ಮಂದಿ ಸಾವು

0

ಟರ್ಕಿ: ಸೋಮವಾರ ಸಂಭವಿಸಿದ ಎರಡು ಪ್ರಬಲ ಭೂಕಂಪದಿಂದ ತತ್ತರಿಸಿರುವ ಟರ್ಕಿಯಲ್ಲಿ ಇಂದು ಮತ್ತೊಮ್ಮೆ 5.6 ತೀವ್ರತೆಯ ಭೂಕಂಪವಾಗಿದೆ.

ಯುರೋಪಿಯನ್ ಮೆಡಿಟರೇನಿಯನ್ ಭೂಕಂಪನಶಾಸ್ತ್ರ ಕೇಂದ್ರ (ಇಎಂಎಸ್‌ಸಿ) ಈ ಕುರಿತು ಮಾಹಿತಿ ನೀಡಿದ್ದು, ಭೂಕಂಪದ ಕೇಂದ್ರವು ಭೂಮಿಯ 2 ಕಿಮೀ ಆಳದಲ್ಲಿದೆ ಎಂದು ಹೇಳಿದೆ.

ಟರ್ಕಿಯ ಪ್ರಮುಖ ನಗರ ಮತ್ತು ಪ್ರಾಂತೀಯ ರಾಜಧಾನಿಯಾದ ಗಾಜಿಯಾಂಟೆಪ್‌’ನಿಂದ 33 ಕಿಲೋಮೀಟರ್ ದೂರದಲ್ಲಿ ಹಾಗೂ 17.9 ಕಿ.ಮೀ. ಆಳದಲ್ಲಿ ಸೋಮವಾರ ಮುಂಜಾನೆ 4.17ರ ಹೊತ್ತಿಗೆ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಕೆಲ ಹೊತ್ತಿನ ಬಳಿಕ 7.5 ತೀವ್ರತೆಯ ಭೂಕಂಪವಾಗಿತ್ತು. ಇದರಿಂದಾಗಿ ಹಲವು ನಗರಗಳಲ್ಲಿ ಕಟ್ಟಡಗಳು ಕುಸಿದಿವೆ.

ಮಧ್ಯಪ್ರಾಚ್ಯ ದೇಶಗಳಾದ ಲೆಬನಾನ್‌, ಸೈಪ್ರಸ್‌ ಹಾಗೂ ಈಜಿಪ್ಟ್‌ನಲ್ಲಿಯೂ ಭೂಮಿ ಕಂಪಿಸಿತ್ತು. ಟರ್ಕಿಯಲ್ಲಿ ಈವರೆಗೆ 2,921 ಮಂದಿ ಹಾಗೂ ಸಿರಿಯಾದಲ್ಲಿ 1,451 ಜನರು ಮೃತಪಟ್ಟಿದ್ದಾರೆ.

ಟರ್ಕಿ ವಿಪತ್ತು ಮತ್ತು ತುರ್ತು ನಿರ್ವಹಣಾ ಪ್ರಾಧಿಕಾರದ ಮಾಹಿತಿ ಪ್ರಕಾರ, ಕನಿಷ್ಠ 15,834 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ 7,840 ಜನರನ್ನು ರಕ್ಷಿಸಲಾಗಿದೆ.