ಬೆಂಗಳೂರು: ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ತನಿಖೆ ಇನ್ನೂ ಮುಗಿಯದಿರೋದ್ರೆ, ಇದೀಗ ಬೆಂಗಳೂರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಪ್ರವೀಣ್ ಗೌಡ ಬೇಲೂರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಪಟ್ಟಣದ ಎಸ್ವಿಎಂ ಶಾಲೆಯ ಬಳಿ ನಿನ್ನೆ ರಾತ್ರಿ ನಡೆದಿದ್ದು, ಸ್ಥಳೀಯರಲ್ಲಿ ಮತ್ತು ಪಕ್ಷದ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ವಿಡಿಯೋ ಮೂಲಕ ಆತ್ಮಹತ್ಯೆಗೆ ಮುನ್ನ ಬೇಡಿಕೆ
35 ವರ್ಷದ ಪ್ರವೀಣ್ ಗೌಡ, ಆತ್ಮಹತ್ಯೆಗೆ ಮುನ್ನ ಒಂದು ವೀಡಿಯೊ ರೆಕಾರ್ಡ್ ಮಾಡಿ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವೀಡಿಯೊದಲ್ಲಿ ಅವರು ತಮ್ಮ ಆತ್ಮಹತ್ಯೆಗೆ ನೇರ ಕಾರಣರಾಗಿರುವ ವ್ಯಕ್ತಿಗಳ ಹೆಸರುಗಳನ್ನು ಉಲ್ಲೇಖಿಸಿದ್ದಾರೆ. ಸಮಂದೂರ್ ಕಿರಣ್, ಗೋಕುಲ್ ಪ್ಯಾಷನ್ ಹರೀಶ್, ಭಾಸ್ಕರ್, ನಾರಾಯಣಪ್ಪ ದೊಡ್ಡಹಾಗಡೆ, ಮಧುಗೌಡ, ಹಾಗೂ ಸರವಣ ಎಂಬವರ ವಿರುದ್ಧ ಗಂಭೀರ ಆರೋಪ ಮಾಡಿದ್ದು, “ನನ್ನ ಸಾವಿಗೆ ಈವರೆಲ್ಲ ಕಾರಣ. ಆದರೆ, ಕಿರಣ್ನನ್ನು ದಯವಿಟ್ಟು ಬಿಡಬೇಡಿ,” ಎಂದು ಮನವಿ ಮಾಡಿದ್ದಾರೆ.
ಆಕ್ರಮಣ, ಮಾನಸಿಕ ಒತ್ತಡ ಮತ್ತು ಪೀಡನೆ ಆರೋಪ
ಪ್ರವೀಣ್ ಅವರ ಆರೋಪದ ಪ್ರಕಾರ, ಕಿರಣ್ ಹಲವು ಹೆಣ್ಣು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾನೆ, ಮತ್ತು ಈ ಎಲ್ಲ ಪ್ರಕರಣಗಳ ಹೊಣೆ ತಾವು ಹೊರತಿರುವುದಾಗಿ ತಿಳಿಸಿದ್ದಾರೆ. ಹಣದ ವಿಚಾರದಲ್ಲಿ ಮಾತನಾಡುವ ನೆಪದಲ್ಲಿ ತಮ್ಮನ್ನು BJP ಮುಖಂಡ ನಾಯನಹಳ್ಳಿ ಮುನಿರಾಜು ಮನೆಗೆ ಕರೆದಿದ್ದರು ಎಂದು ತಿಳಿಸಿದ್ದಾರೆ. ಅಲ್ಲಿಗೆ ಕರೆಸಿಕೊಂಡು ಆನೇಕಲ್ ಕೌನ್ಸಿಲರ್ ಭಾಗ್ಯ ಹಾಗೂ ಆಕೆಯ ಪತಿ ಶ್ರೀನಿವಾಸ್ ಹಲವರನ್ನು ಕರೆಸಿ, ಎರಡು ಗಂಟೆಗಳ ಕಾಲ ಹಲ್ಲೆ ನಡೆಸಿದ್ದರೆಂದು ವಿಡಿಯೋದಲ್ಲಿ ಹೇಳಿದ್ದಾರೆ.
ಅದರಲ್ಲದೆ, “ಅವರು ನನ್ನ ಮೇಲೆ ಮೊಬೈಲ್ ಕಸಿದುಕೊಂಡು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಮನಸೋ ಇಚ್ಛೆಗೆ ಹಲ್ಲೆ ಮಾಡಿದ್ದಾರೆ,” ಎಂದು ಕಂಗೆಡುತ್ತಾ ಹೇಳಿದ್ದಾರೆ. “ನಾನು ಸತ್ತ ಮೇಲೆ ನನ್ನ ದೇಹದ ಮೇಲೆ ಇರುವ ಗಾಯಗಳ ಗುರುತನ್ನು ಪರಿಶೀಲಿಸಿ ನ್ಯಾಯ ಕೊಡಿಸಿ,” ಎಂಬ ಮೂಲಕ ಸರಕಾರ ಮತ್ತು ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ.
ಪೊಲೀಸರಿಂದ ತನಿಖೆ ಮುಂದುವರಿಕೆ
ಪ್ರವೀಣ್ ಅವರ ಆತ್ಮಹತ್ಯೆಯ ನಂತರ ಆನೇಕಲ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂಧ ತನಿಖೆ ಆರಂಭಿಸಿದ್ದಾರೆ. ವೀಡಿಯೊದ ಆಧಾರದ ಮೇಲೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದ್ದು, ಅಧಿಕೃತ ವರದಿ ಹೊರಬರಬೇಕಿದೆ.
ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ
ಇದೇ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರ ನಡುವಿನ ಆಂತರಿಕ ಕಲಹ, ರಾಜಕೀಯ ದುರ್ಬಳಕೆ, ಮಾನಸಿಕ ಒತ್ತಡಗಳು ಮತ್ತೆ ಒಂದ್ಸಾರಿ ಬೆಳಕಿಗೆ ಬಂದಿವೆ. ಈ ಪ್ರಕರಣ ಕೂಡ ರಾಜ್ಯ ರಾಜಕೀಯದಲ್ಲೂ ಸಂಚಲನ ಮೂಡಿಸಬಹುದಾದ ಸಾಧ್ಯತೆ ಇದೆ.














