ಕುನೋ: ದಕ್ಷಿಣ ಆಫ್ರಿಕಾದಿಂದ ತಂದು ಮಧ್ಯಪ್ರದೇಶದಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ತರಲಾಗಿದ್ದ ಚೀತಾಗಳಲ್ಲಿ ಮತ್ತೊಂದು ಚೀತಾ ಮೃತಪಟ್ಟಿದೆ.
ಅನಾರೋಗ್ಯದಿಂದ 6 ವರ್ಷದ ಗಂಡು ಚೀತಾ ‘ಉದಯ್’ ಸಾವನ್ನಪ್ಪಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ‘ಸಾಶಾ’ ಹೆಸರಿನ ಚೀತಾ ಕೆಲತಿಂಗಳ ಹಿಂದೆ ಮೃತಪಟ್ಟಿತ್ತು.
ಏಪ್ರಿಲ್ 23ರ ಭಾನುವಾರ ಬೆಳಗ್ಗೆಯಿಂದ ಅಸ್ವಸ್ಥಗೊಂಡಿದ್ದ ಚೀತಾವನ್ನು ವನ್ಯಜೀವಿ ವೈದ್ಯರು ಚಿಕಿತ್ಸೆ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ವಾರ್ಡ್ ನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಸಂಜೆ 4 ಗಂಟೆ ಸಮಯದಲ್ಲಿ ಚೀತಾ ಮೃತಪಟ್ಟಿದೆ. ಉದಯ್ ಚೀತಾ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್. ಚೌಹಾಣ್ ಮಾಹಿತಿ ನೀಡಿದ್ದಾರೆ. ಪಶುವೈದ್ಯಕೀಯ ತಂಡ ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಲಿದೆ. ಸಂಪೂರ್ಣ ಮರಣೋತ್ತರ ಪರೀಕ್ಷೆಯನ್ನು ವಿಡಿಯೋ ಮತ್ತು ಛಾಯಾಗ್ರಹಣ ಮಾಡಲಾಗುತ್ತದೆ.
ಚೀತಾ ಸಾಶಾ ಕಳೆದ ಮಾರ್ಚ್ ತಿಂಗಳಲ್ಲಿ ಸಾವನ್ನಪ್ಪಿತ್ತು. ಕಳೆದ 3 ತಿಂಗಳಿಂದ ಈ ಚೀತಾ ಅನಾರೋಗ್ಯದಿಂದ ಬಳಲುತ್ತಿದ್ದು ಅದರ ಸಾವಿಗೆ ಕಿಡ್ನಿ ಸೋಂಕು ಕಾರಣ ಎಂದು ತಿಳಿದುಬಂದಿತ್ತು.
ಆದರೆ ಉದಯ್ ಚೀತಾ ಸಾವಿಗೆ ಮರಣೋತ್ತರ ಪರೀಕ್ಷೆ ವರದಿ ಬಳಿಕ ಕಾರಣ ತಿಳಿಯಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಮಹತ್ವದ ಚೀತಾ ಯೋಜನೆಯಲ್ಲಿ ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದಿಂದ ಇಪ್ಪತ್ತು ಚೀತಾಗಳನ್ನು ತರಲಾಗಿತು. ಕಳೆದ ವರ್ಷ ನಮೀಬಿಯಾದಿಂದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಪರಿಚಯಿಸಲಾದ ಎಂಟು ಚೀತಾಗಳಲ್ಲಿ ಒಂದಾದ ಸಾಶಾ ಮಾರ್ಚ್ ನಲ್ಲಿ ಮೃತಪಟ್ಟಿತ್ತು. ಭಾನುವಾರ ಎರಡನೇ ಚೀತಾ ಸಾವಿನೊಂದಿಗೆ, ಈಗ ಚೀತಾಗಳ ಸಂಖ್ಯೆ 18 ಕ್ಕೆ ಇಳಿದಿದೆ.