ಮನೆ ಅಪರಾಧ ನರಭಕ್ಷಕ ಚಿರತೆ ದಾಳಿಗೆ ಮತ್ತೊಂದು ಬಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ

ನರಭಕ್ಷಕ ಚಿರತೆ ದಾಳಿಗೆ ಮತ್ತೊಂದು ಬಲಿ: ಕಂಡಲ್ಲಿ ಗುಂಡಿಕ್ಕಲು ಆದೇಶ

0

ಮೈಸೂರು(Mysuru): ತಿ. ನರಸೀಪುರ ತಾಲೂಕಿನ ಹೊರಳಹಳ್ಳಿ ಗ್ರಾಮದ 11 ವರ್ಷದ ಬಾಲಕನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿದ್ದು, ನರಭಕ್ಷಕ ಚಿರತೆಯಿಂದಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಚಿರತೆ ದಾಳಿಗೆ ಇದು ನಾಲ್ಕನೇ ಸಾವಾಗಿದ್ದು, ಶುಕ್ರವಾರವಷ್ಟೇ ಕನ್ನಾಯಕನಹಳ್ಳಿ ಗ್ರಾಮದ ಸಿದ್ದಮ್ಮ ಎಂಬವರನ್ನು ಚಿರತೆ ಕೊಂದಿತ್ತು. ಈ ಹಿಂದೆ ಉಕ್ಕಲಗೆರೆ ಮಂಜುನಾಥ, ಎಂ. ಕೆಬ್ಬೆಹುಂಡಿಯ ಮೇಘನಾ ಎಂಬಾಕೆಯನ್ನು ಚಿರತೆ ದಾಳಿ ಮಾಡಿ ಸಾಯಿಸಿತ್ತು. ಶನಿವಾರ ರಾತ್ರಿ ಬಾಲಕನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.

ಶನಿವಾರ ತಡರಾತ್ರಿ ಬಾಲಕ ಜಯಂತ್ (11) ನಾಪತ್ತೆಯಾಗಿದ್ದ. ಗ್ರಾಮಸ್ಥರು ಹುಡುಕಾಟ ನಡೆಸಿದಾಗ ರವಿವಾರ ಗ್ರಾಮದಿಂದ ಒಂದು ಕಿ.ಮೀ. ದೂರವಿರುವ ಪೊದೆಯೊಂದಲ್ಲಿ ಮೃತದೇಹ ಪತ್ತೆಯಾಗಿದೆ. ಬಾಲಕನ ಮೃತದೇಹದ ಅರ್ಧ ಭಾಗ ಮಾತ್ರ ದೊರೆತಿದ್ದು, ತಲೆ ಭಾಗವನ್ನು ಚಿರತೆ ತಿಂದಿರಬಹುದೆಂದು ಅನುಮಾನ ವ್ಯಕ್ತವಾಗಿದೆ.

ಕಂಡಲ್ಲಿ ಗುಂಡಿಕ್ಕಲು ಆದೇಶ

6 ಕಿ.ಮೀ. ವ್ಯಾಪ್ತಿಯಲ್ಲಿ  ಚಿರತೆ ದಾಳಿಯಿಂದ ಮೂವರು ಸಾವನ್ನಪ್ಪಿದ್ದು, ಪ್ರಕರಣಗಳಲ್ಲಿ ಸಾಮ್ಯತೆ ಕಂಡು ಬಂದಿದೆ. ಹೀಗಾಗಿ ಒಂದೇ ಚಿರತೆ ಈ ಮೂವರನ್ನು ಹತ್ಯೆ ಮಾಡಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಚಿರತೆ ನರಭಕ್ಷಕ ಆಗಿದ್ದು, ಕಾರ್ಯಾಚರಣೆ ವೇಳೆ ಕಂಡಲ್ಲಿ ಗುಂಡಿಕ್ಕಲು ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಚಿರತೆಯ ಹುಡುಕಾಟಕ್ಕೆ ಅರಣ್ಯಾಧಿಕಾರಿಗಳಿಗೆ ವಿಶೇಷ ತಂಡ ರಚನೆ ಮಾಡಿ ಕಾರ್ಯಾಚರಣೆ ನಡೆಸುವಂತೆ ಸೂಚನೆ ನೀಡಲಾಗಿದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.