ಮನೆ ರಾಜ್ಯ ಕೊಡಗಿನಲ್ಲಿ ಮತ್ತೊಂದು ಕಾಡಾನೆ ಸಾವು

ಕೊಡಗಿನಲ್ಲಿ ಮತ್ತೊಂದು ಕಾಡಾನೆ ಸಾವು

0
https://www.youtube.com/channel/UCmDoYGj_oDaxpT_t7Pa9iEQ

ಮಡಿಕೇರಿ (Madikeri): ಕೊಡಗಿನ ತಿತಿಮತಿ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆಯೊಂದು ಮೃತಪಟ್ಟಿರುವ ಘಟನೆ ನಡೆದಿದೆ. ಇದು ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ವರದಿಯಾದ ಅಸಹಜ ಕಾಡಾನೆ ಸಾವಿನ ನಾಲ್ಕನೇ ಪ್ರಕರಣವಾಗಿದೆ.

ದಕ್ಷಿಣ ಕೊಡಗಿನ ಬಡಗಬನಂಗಲ ಗ್ರಾಮದ ಬಿಬಿಟಿಸಿ ಖಾಸಗಿ ಎಸ್ಟೇಟ್‌ ನಲ್ಲಿನ ಕೆರೆಯಲ್ಲಿ ಕಾಡಾನೆ ಸಾವನ್ನಪ್ಪಿದೆ. ಬುಧವಾರ ಕೆಲಸಕ್ಕೆ ಹಾಜರಾಗಿದ್ದ ಎಸ್ಟೇಟ್ ಕಾರ್ಮಿಕರು ಎಸ್ಟೇಟ್ ಆವರಣದಲ್ಲಿರುವ ಕೊಳದೊಳಗೆ ಆನೆಯ ಶವ ತೇಲುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಅರಣ್ಯ ಸಿಬ್ಬಂದಿಗೆ ಮಾಹಿತಿ ನೀಡಿದ್ದು ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಕ್ರೇನ್ ಬಳಸಿ ಆನೆಯ ಮೃತದೇಹವನ್ನು ಮೇಲೆತ್ತಿದ್ದಾರೆ. ಕಾಡು ಆನೆಗೆ ಸುಮಾರು 60 ವರ್ಷ ವಯಸ್ಸಾಗಿದೆ ಎಂದು ಆರ್‌ಎಫ್‌ಒ ಅಶೋಕ್ ಖಚಿತಪಡಿಸಿದ್ದಾರೆ.

ಮನುಷ್ಯ-ಆನೆ ಸಂಘರ್ಷವನ್ನು ನಿಯಂತ್ರಿಸಲು ಅದರ ಚಲನವಲನವನ್ನು ಪತ್ತೆಹಚ್ಚಲು ಹೆಣ್ಣು ಆನೆಗೆ ಇತ್ತೀಚೆಗೆ ರೇಡಿಯೊ ಕಾಲರ್ ಹಾಕಲಾಗಿತ್ತು. ಆದರೆ, ಆನೆ ಮೇವು ಅರಸಿ ಖಾಸಗಿ ಎಸ್ಟೇಟ್‌ಗೆ ನುಗ್ಗಿದೆ. ಕೆರೆಗೆ ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ. ಕೆರೆಯ ತುಂಬೆಲ್ಲ ಮಳೆ ನೀರು ತುಂಬಿದ್ದರಿಂದ ಆನೆ ಹೊರ ಬರಲು ಸಾಧ್ಯವಾಗಲಿಲ್ಲ.

ಅರಣ್ಯ ಇಲಾಖೆ ಪಶು ವೈದ್ಯಾಧಿಕಾರಿ ಚಿಟ್ಟಿಯಪ್ಪ ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದು, ಮೃತದೇಹವನ್ನು ಖಾಸಗಿ ಎಸ್ಟೇಟ್ ಒಳಗೆ ಇಲಾಖೆ ಸಿಬ್ಬಂದಿ ಹೂಳಿದ್ದಾರೆ. ಕಳೆದ ವಾರವಷ್ಟೇ ದಕ್ಷಿಣ ಕೊಡಗಿನಲ್ಲಿ ವಿದ್ಯುತ್ ಸ್ಪರ್ಶಿಸಿ ಮೂರು ಕಾಡಾನೆಗಳು ಸಾವನ್ನಪ್ಪಿದ್ದವು. 

ಹಿಂದಿನ ಲೇಖನನೆರೆ ಪರಿಹಾರ ಕಾರ್ಯಕ್ಕೆ 500 ಕೋಟಿ ರೂ. ಬಿಡುಗಡೆ: ಬಸವರಾಜ ಬೊಮ್ಮಾಯಿ
ಮುಂದಿನ ಲೇಖನಶೀಘ್ರದಲ್ಲೇ ಪಿಎಸ್‌ಐ ನೇಮಕಾತಿಗೆ ಮರು ಪರೀಕ್ಷೆ: ಸಚಿವ ಆರಗ ಜ್ಞಾನೇಂದ್ರ