ಮನೆ ಕಾನೂನು ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಪರ್ಧಾ ವಿರೋಧಿ ಚಟುವಟಿಕೆ: ಗೂಗಲ್’ಗೆ ₹1,337 ಕೋಟಿ ದಂಡ ವಿಧಿಸಿದ...

ಆಂಡ್ರಾಯ್ಡ್ ಮೊಬೈಲ್ ಮಾರುಕಟ್ಟೆಯಲ್ಲಿ ಸ್ಪರ್ಧಾ ವಿರೋಧಿ ಚಟುವಟಿಕೆ: ಗೂಗಲ್’ಗೆ ₹1,337 ಕೋಟಿ ದಂಡ ವಿಧಿಸಿದ ಸಿಸಿಐ

0

ಆಂಡ್ರಾಯ್ಡ್ ಮೊಬೈಲ್ ಸಾಧನ ವ್ಯವಸ್ಥೆಯಲ್ಲಿನ ಹಲವು ಮಾರುಕಟ್ಟೆಗಳಲ್ಲಿ ತನ್ನ ಪ್ರಬಲ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಂಬಂಧಿಸಿದಂತೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) ಗೂಗಲ್’ಗೆ ಬರೋಬ್ಬರಿ ₹1337.76 ಕೋಟಿ ದಂಡ ವಿಧಿಸಿದೆ.

ದಂಡದ ಜೊತೆಗೆ ಸ್ಪರ್ಧಾ ವಿರೋಧಿ ಚಟುವಟಿಕೆಗಳಿಂದ ದೂರು ಉಳಿಯುವಂತೆ ಗೂಗಲ್’ಗೆ ಸಿಸಿಐಯು ನಿರ್ದೇಶಿಸಿದ್ದು, ಉಲ್ಲೇಖಿತ ಕಾಲಮಿತಿಯಲ್ಲಿ ತನ್ನ ನಡೆಯನ್ನು ಮಾರ್ಪಡಿಸಿಕೊಳ್ಳುವಂತೆ ನಿರ್ದೇಶಿಸಿದೆ.

“ದಂಡ ವಿಧಿಸಿದ್ದು, ಕಾಯಿದೆಯ ಸೆಕ್ಷನ್ 4ರ ಅಡಿ ಸ್ಪರ್ಧಾ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಹಿಂದೆ ಸರಿಯುವಂತೆ ಆದೇಶ ಮಾಡಲಾಗಿದೆ” ಎಂದು ಸಿಸಿಐ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಗೂಗಲ್ ಮೊಬೈಲ್ ಸೂಟ್ ಅನ್ನು ಕಡ್ಡಾಯಪೂರ್ವವಾಗಿ ಅಳವಡಿಸಿಕೊಳ್ಳಬೇಕಿರುವುದು ಮತ್ತು ಅದನ್ನು ತೆಗೆದುಹಾಕಲು ಯಾವುದೇ ಆಯ್ಕೆ ಇಲ್ಲದಿರುವುದು ಮೊಬೈಲ್ ಸಾಧನ ಉತ್ಪಾದಕರ ಮೇಲೆ ವಿಧಿಸಿರುವ ಅನ್ಯಾಯದ ಷರತ್ತು ಎಂದು ಸಿಸಿಐ ತನಿಖೆಯಲ್ಲಿ ಹೇಳಿದೆ.

ಆನ್ಲೈನ್ ಸರ್ಚ್ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಗೂಗಲ್ ಬಳಕೆ ಮಾಡಿಕೊಂಡಿದ್ದು, ಸ್ಪರ್ಧೆ ಒಡ್ಡುವ ಅಪ್ಲಿಕೇಶನ್ಗಳಿಗೆ ಮಾರುಕಟ್ಟೆ ಪ್ರವೇಶ ನಿರಾಕರಿಸಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಓಎಸ್ ಆಧರಿತ ಅಪ್ಲಿಕೇಶನ್ ಸ್ಟೋರ್ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಬಳಸಿಕೊಂಡು ಆನ್ಲೈನ್ ಸಾಮಾನ್ಯ ಹುಡುಕಾಟದಲ್ಲಿ ತಾನು ಹೊಂದಿರುವ ಸ್ಥಾನವನ್ನು ಗೂಗಲ್ ರಕ್ಷಿಸಿಕೊಂಡಿದೆ ಎಂದು ಹೇಳಲಾಗಿದೆ.

ಯೂಟ್ಯೂಬ್ ಮೂಲಕ ಆನ್ಲೈನ್ ವಿಡಿಯೋ ಹೋಸ್ಟಿಂಗ್ ಪ್ಲಾಟ್ಫಾರ್ಮ್ (ಓವಿಎಚ್ಪಿ) ಮಾರುಕಟ್ಟೆಯಲ್ಲಿ ಪ್ರವೇಶ ಮಾಡಲು ಮತ್ತು ಅಲ್ಲಿ ಗಳಿಸಿಕೊಂಡಿರುವ ಸ್ಥಾನವನ್ನು ರಕ್ಷಿಸಲು ಆಂಡ್ರಾಯ್ಡ್ ಓಎಸ್ ಆಧರಿತ ಅಪ್ಲಿಕೇಷನ್ ಸ್ಟೋರ್ ಮಾರುಕಟ್ಟೆಯಲ್ಲಿನ ತನ್ನ ಪ್ರಬಲ ಸ್ಥಾನವನ್ನು ಗೂಗಲ್ ಬಳಸಿಕೊಂಡಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಮೊಬೈಲ್ ಅಪರೇಟಿಂಗ್ ಸಿಸ್ಟಂ ಮತ್ತು ತನ್ನ ಹಲವು ಮೊಬೈಲ್ ಅಪ್ಲಿಕೇಷನ್’ಗಳಾದ ಪ್ಲೇ ಸ್ಟೋರ್, ಗೂಗಲ್ ಸರ್ಚ್, ಗೂಗಲ್ ಕ್ರೋಮ್, ಯೂಟ್ಯೂಬ್ ಇತ್ಯಾದಿಯ ಪರವಾನಗಿಗೆ ಸಂಬಂಧಿಸಿದಂತೆ ಗೂಗಲ್ನ ಹಲವು ಚಟುವಟಿಕೆಗಳನ್ನು ಆಯೋಗವು ವಿಶ್ಲೇಷಿಸಿದೆ. ಆಪಲ್ನಿಂದ ಎದುರಿಸುತ್ತಿರುವ ಸ್ಪರ್ಧಾ ನಿರ್ಬಂಧಗಳ ಬಗ್ಗೆಯೂ ಗೂಗಲ್ ತನಿಖೆಯ ಸಂದರ್ಭದಲ್ಲಿ ವಾದಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಹಿಂದಿನ ಲೇಖನಸಂಗಂ ವಿಶ್ವಕವಿ ಸಮ್ಮೇಳನದಲ್ಲಿ ಮೋದಿ ಜಿಂದಾಬಾದ್ ಘೋಷಣೆ: ಗಲಾಟೆ
ಮುಂದಿನ ಲೇಖನಕಳಲೆ: ಶ್ರೀ ಲಕ್ಷ್ಮೀ ಕಾಂತ ಸ್ವಾಮಿ ದೇವಸ್ಥಾನ