ಮೈಸೂರು(Mysuru): ರಾಜಾಡಳಿತವಿದ್ದ ಮೈಸೂರು ರಾಜ್ಯದಲ್ಲಿ ಸಮಸಮಾಜ ನಿರ್ಮಾಣಕ್ಕೆ ನಾಂದಿ ಹಾಡಿದ ಸಾಕ್ಷಿಗಳು ಹಾಗೂ ಐತಿಹ್ಯಗಳು ಇಂದಿಗೂ ಜೀವಂತವಾಗಿರುವ ಈ ಹೊತ್ತಿನಲ್ಲಿ ಸಮುದಾಯವೊಂದನ್ನು ಮೂಲೆಗುಂಪು ಮಾಡುವ ಬಿಜೆಪಿ ಹುನ್ನಾರ ಸಮಸಮಾಜದ ವಿರೋಧಿ ನಡೆಯಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ತಿಳಿಸಿದರು.
ಅಲ್ಪಸಂಖ್ಯಾತ ಸಮುದಾಯವನ್ನು ಹಣಿಯಲೇಬೇಕೆಂಬ ಏಕಮುಖ ನಿರ್ಧಾರ ಮಾಡಿರುವ ಬಿಜೆಪಿ ನೇತೃತ್ವದ ಸರ್ಕಾರದ ಈ ನಡೆ ಮೈಸೂರು ರಾಜವಂಶಸ್ಥರಿಗೆ ಮಾಡಿದ ಅಪಮಾನವಲ್ಲದೆ ಮತ್ತೇನೂ ಅಲ್ಲ. ಮೈಸೂರು ಸಂಸ್ಥಾನದ ರಾಜರು ಸಮಾನತೆ, ಸಹಬಾಳ್ವೆಗೆ ಆದ್ಯತೆ ನೀಡಿರುವುದು ಕಣ್ಣೆದುರಿಗೆ ಇದ್ದರೂ, ಅದಲ್ಲವನ್ನೂ ಮೂಲೆಗೆ ಸರಿಸಿ, ಟಿಪ್ಪುವಿನಂತಹ ಸಾಹಸಿಯ ಹೆಸರನ್ನು ರೈಲಿನ ಮೇಲಿಂದ ತೆಗೆಯುವ ಮೂಲಕ ಕ್ಷುಲ್ಲಕ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.
ಟಿಪ್ಪು ಅಪ್ರತಿಮ ಸಾಹಸಿ ಹಾಗೂ ಅತ್ಯುತ್ತಮ ಆಡಳಿತಗಾರನಾಗಿದ್ದು, ಆತನ ಹೆಸರಿಗೆ ಮಸಿ ಬಳಿಯುವ ಕೆಲಸಕ್ಕೆ ಸಂಘಪರಿವಾರ ಹಾಗೂ ಅದರ ಅಂಗಸಂಸ್ಥೆಗಳು ನಡೆಸಿದ ಹುನ್ನಾರದ ಫಲವೇ ಟಿಪ್ಪು ಎಕ್ಸ್ಪ್ರೆಸ್ ರೈಲಿನ ಹೆಸರು ಬದಲಿಸಲು ಕಾರಣವಾಗಿದೆ. ಇದು ಸಮುದಾಯವೊಂದರ ಓಲೈಕೆಯ ಭಾಗವಾಗಿದೆ ಎಂದರು.
ರಾಜ್ಯ ಹಾಗೂ ಕೇಂದ್ರದಲ್ಲಿರುವ ಅಧಿಕಾರಾರೂಢ ಬಿಜೆಪಿ ಸರ್ಕಾರಗಳು ಅಲ್ಪಸಂಖ್ಯಾತರನ್ನು ಹಣಿಯುವ ಹುನ್ನಾರ ನಡೆಸಿದ್ದು, ಅದರ ಮುಂದುವರೆದ ಭಾಗವೇ ಟಿಪ್ಪು ಹೆಸರಿನ ರೈಲಿನ ಯೋಜನೆ. ಈ ಎರಡೂ ಸರ್ಕಾರಗಳು ಅಧಿಕಾರಕ್ಕೆ ಬಂದಂದಿನಿಂದ ಇಂದಿನವರೆಗೂ ಅಲ್ಪಸಂಖ್ಯಾತರ ಮೇಲೆ ಒಂದಿಲ್ಲೊಂದು ಬಗೆಯಲ್ಲಿ ಗದಾಪ್ರಹಾರ ಮಾಡುತ್ತಾ ಬಂದಿರುವುದು ಜಗಜ್ಜಾಹಿರಾಗಿದೆ ಎಂದು ತಿಳಿಸಿದರು.
ಮೈಸೂರು ರಾಜಮನೆತನದ ಬಗ್ಗೆ ಈ ನಾಡಿನ ಜನರಿಗೆ ಗೌರವವಿರುವುದು ಅಕ್ಷರಶಃ ನಿಜವಾದರೂ, ಆ ಗೌರವವನ್ನು ಬಿಜೆಪಿ ಪಕ್ಷ ತಮ್ಮ ಸ್ವಾರ್ಥಸಾಧನೆಗೆ ಹಾಳುಗೆಡವುತ್ತಿರುವುದನ್ನು ಮೈಸೂರಿನ ಜನ ಕ್ಷಮಿಸಲಾರರು ಎಂದು ಹೇಳಿದರು.
ಈ ನೆಲದ ಹೋರಾಟಗಾರರ ಸಾಲಿನಲ್ಲಿ ತನ್ನದೇ ಆದ ಸ್ಥಾನ ಕಾಯ್ದುಕೊಂಡಿರುವ ಟಿಪ್ಪುವಿನ ಹೆಸರನ್ನು ಕೇವಲ ರೈಲಿನಿಂದ ತೆಗೆದ ಮಾತ್ರಕ್ಕೆ ಇತಿಹಾಸ ಪುಟಗಳಿಂದಾಗಲಿ ಅಥವಾ ಜನಮಾನಸದಿಂದಾಗಲಿ ಆತನ ಹೆಸರನ್ನು ಅಳಿಸಲು ಎಂದಿಗೂ ಸಾಧ್ಯವಿಲ್ಲ ಎಂಬುದನ್ನು ವಿಕೃತ ಮನಸ್ಸುಗಳು ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.