’ಅನು’ ಎಂದರೆ ಅನುಸರಿಸು, ಜೊತೆಗೂಡಿಸು, ಒಂದೇ ದಿಶೆಯಲ್ಲಿ ಅಥವಾ ಒಂದಾದ ಮೇಲೊಂದರಂತೆ ಕ್ರಮವನ್ನನುಸರಿಸಿ ಎಂದರ್ಥ ಆದುದರಿಂದ ‘ಅನುಲೋಮ’ವೆಂದರೆ ಕ್ರಮ ಕ್ರಮವಾಗಿ, ಕೂದಲು ಬಾಗಿರುವ ದಿಕ್ಕಿನಲ್ಲಿ ಇಲ್ಲವೆ ಸ್ವಾಭಾವಿಕವಾದ ದಿಕ್ಕಿನಲ್ಲಿ ಎಂದರ್ಥ ‘ಅನುಲೋಮ ಪ್ರಾಣಾಯಾಮ’ದಲ್ಲಿ ಪೂರಕ’ವು ಅಂದರೆ, ಉಸಿರನ್ನು ಮೂಗಿನ ಎರಡು ಹೊಳ್ಳೆಗಳಲ್ಲಿ ಎಳೆದು, ಹೊರಕ್ಕೆ ಬಿಡುವಾಗ ಅಂದರೆ ‘ರೇಚಕ’ದಲ್ಲಿ ಒಂದು ಸಲ ಬಲಹೊಳ್ಳೆಯಲ್ಲಿ ಬಿಟ್ಟರೆ, ಇನ್ನೊಂದು ಸಲ ಎಡಹೊಳೆಯಲ್ಲಿ ಬಿಡಬೇಕು.
ಅಭ್ಯಾಸಕ್ರಮ
೧. ಮೊದಲು, ಯಾವುದಾದರೂ ಸುಖಾಸನದಲ್ಲಿ ಅಂದರೆ ‘ಪದ್ಮಾಸನ’ ‘ಸಿದ್ಧಾಸನ’ ಅಥವಾ ‘ವೀರಾಸನ’ದಲ್ಲಿ ( ಕುಳಿತುಕೊಳ್ಳಬೇಕು.
೨. ಬಳಿಕ, ಬೆನ್ನನ್ನು ನೇರವಾಗಿ ಬಗ್ಗದಂತೆ ನಿಲ್ಲಿಸಿ, ತಲೆಯನ್ನು ಮುಂಡದ ಕಡೆಗೆ ಬಾಗಿಸಿ, ಗದ್ದವನ್ನು ಕತ್ತಿನ ಎಲುಬುಗಳ ನಡುವಣ ಮತ್ತು ಎದೆ ಎಲುಬಿನ ಮೇಲಣ ಕುಳಿಯಲ್ಲಿ ಒತ್ತರಿಸಬೇಕು. ಇದು ‘ಜಾಲಂಧರಬಂಧ’.
೩. ಆಮೇಲೆ, ‘ಉಜ್ಜಾಯೀ’ ಪ್ರಾಣಾಯಾಮದಲ್ಲಿ ಮಾಡುವಂತೆ ಆಳವಾಗಿ ಉಸಿರನ್ನು ಮೂಗಿನ ಎರಡೂ ಹೊಳ್ಳೆಗಳ ಮೂಲಕ ಒಳಕ್ಕೆಳೆದು, ಶ್ವಾಸಕೋಶಗಳನ್ನು ಪೂರ್ಣವಾಗಿ ತುಂಬಿಸಬೇಕು.
೪. ಆ ಬಳಿಕ, ಅಭ್ಯಾಸಿಯ ಶಕ್ತಿಗೆ ತಕ್ಕಂತೆ ಉಸಿರನ್ನು 5 ರಿಂದ 10 ಸೆಕೆಂಡುಗಳ ಕಾಲ ಒಳಗೇ ನಿಲ್ಲಿಸಿ, ಅಂದರೆ ‘ಅಂತರಕುಂಭಕವನ್ನು ಆಚರಿಸಬೇಕು ಆಗ ‘ಮೂಲಬಂಧ’ದಲ್ಲಿರಬೇಕು.
೫. ಆಮೇಲೆ, ಈ ಹಿಂದೆ ‘ಸೂರ್ಯಭೇದನ ಪ್ರಾಣಾಯಾಮ ಕ್ರಮದಲ್ಲಿ ವಿವರಿಸಿರುವಂತೆ ಬಲಗೈ ಹೆಬ್ಬೆರಳು ಮತ್ತು ಉಂಗುರದ ಹಾಗೂ ಕಿರುಬೆರಳುಗಳನ್ನು ಕ್ರಮವಾಗಿ ಬಲ ಮತ್ತು ಎಡ ಮೂಗಿನ ಹೊಳ್ಳೆಗಳ ಮೇಲಿರಿಸಿ, ಬಳಿಕ ಮೂಲಬಂಧವನ್ನು ಸಡಿಲಿಸಿ ಎಡಹೊಳ್ಳೆಯನ್ನು ಪೂರ್ಣವಾಗಿ ಮುಚ್ಚಿ ಬಲ ಹೊಳ್ಳೆ ಯನ್ನು ಮಾತ್ರ ಅರೆ ತೆರೆದು ಒಳಗಿಂದ ಉಸಿರನ್ನು ನಿಧಾನವಾಗಿ ಹೊರಕ್ಕೆ ಬಿಡಬೇಕು ಈ ರೀತಿಯಲ್ಲಿಯೇ ಶಾಸಕೋಶಗಳಲ್ಲಿಯ ಉಸಿರೆಲ್ಲವನ್ನೂ ಹೊರ ಹೊರಡಿಸುವವರೆಗೂ ಮಾಡಿ, ಬಳಿಕ ಮೂಗಿನ ಮೇಲಿನ ಬೆರಳನ್ನು ಕೆಳಕ್ಕಿಳಿಸಬೇಕು.
೬. ಈಗ 3 ನೆಯ ಪರಿಚ್ಛೇದದಲ್ಲಿ ವಿವರಿಸಿರುವಂತೆ ಉಸಿರನ್ನು ಮೂಗಿನ ಎರಡೂ ಹೊಳ್ಳೆಗಳ ಮೂಲಕ ಒಳಕ್ಕೆಳೆದು, ಶ್ವಾಸಕೋಶಗಳನ್ನು ಪೂರ್ಣವಾಗಿ ತುಂಬಿಸ ಬೇಕು.
೭. ಪರಿಚ್ಛೇದ ೪ರಲ್ಲಿ ವಿವರಿಸಿರುವಂತೆ ‘ಮೂಲಬಂಧ’ದಲ್ಲಿದ್ದು, ಅಭ್ಯಾಸಕನ ಶಕ್ತಿಗೆ ತಕ್ಕಂತೆ 5 ರಿಂದ 10 ಸೆಕೆಂಡುಗಳ ಕಾಲ ಅಂತರಕುಂಭಕವನ್ನು ಆಚರಿಸಬೇಕು. ಪರಿಚ್ಛೇದ 4ರಲ್ಲಿ ನಿಲ್ಲಿಸುವಷ್ಟು ಕಾಲವೇ ಇದರಲ್ಲಿಯೂ ಇರಬೇಕು
೮. ಮತ್ತೆ ಬಲಗೈ ಬೆರಳುಗಳನ್ನು ಮೂಗಿನ ಹೊಳ್ಳೆಗಳ ಮೇಲೆ ತರಬೇಕು. ಈಗ ‘ಮೂಲಬಂಧ’ವನ್ನು ಸಡಿಲಿಸಿ, ಬಲಹೊಳ್ಳೆಯನ್ನು ಪೂರಾ ಮುಚ್ಚಿ ಎಡ ಹೊಳ್ಳೆಯನ್ನು ಅರೆತರೆದು, ಉಸಿರನ್ನು ಮೆಲ್ಲಮೆಲ್ಲನೆ ಹೊರಬಿಡುತ್ತ, ಶ್ವಾಸಕೋಶದಲ್ಲಿಯ ಉಸಿರೆಲ್ಲವನ್ನೂ ಬರಿದು ಮಾಡಬೇಕು.
೯. ಇಲ್ಲಿಗೆ ‘ಅನುಲೋಮ ಪ್ರಾಣಾಯಾಮ’ ಚಕ್ರದ ಒಂದು ಸುತ್ತು ಮುಗಿದಂತಾಗುತ್ತದೆ.
೧೦. ಈ ಮೇಲಿನ ಬಗೆಯಲ್ಲಿ ಈ ಪ್ರಾಣಾಯಾಮ ಚಕ್ರದಲ್ಲಿ ಎಡೆಬಿಡದೆ 5 ರಿಂದ 8 ರ ವರೆಗೆ ಆವರ್ತಿಸಬೇಕು.
೧೧. ಇದು ಮುಗಿದ ಬಳಿಕ ‘ಶವಾಸನ’ದಲ್ಲಿ ಮಲಗಬೇಕು.
ಪರಿಣಾಮಗಳು
‘ಉಜ್ಜಾಯಿ’, ‘ನಾಡಿಶೋಧನ’, ಮತ್ತು ‘ಸೂರ್ಯಭೇದನ’ ಪ್ರಾಣಾಯಾಮಗಳಲ್ಲಿ ಆಗುವ ಸತ್ಪರಿಣಾಮಗಳೇ ಇದಕ್ಕೂ ಅನ್ವಯಿಸುತ್ತವೆ.
ಎಚ್ಚರಿಕೆ
೧. ‘ಅನುಲೋಮ ಪ್ರಾಣಾಯಾಮ’ದಲ್ಲಿ ‘ರೇಚಕ’ ಕ್ಕೆ ಬೇಕಾಗುವ ಕಾಲ ಪೂರಕ ಕ್ಕಿಂತಲೂ ಹೆಚ್ಚಾಗಿರುತ್ತದೆ. ಇದರಿಂದ ಉಸಿರಾಟದ ಸಾಮರಸ್ಯದಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಪರಿಣಮಿಸುತ್ತದೆ. ಇದು ಕಷ್ಟವಾದುದರಿಂದ ಇದನ್ನು ಈ ಅಭ್ಯಾಸದಲ್ಲಿ ಚೆನ್ನಾಗಿ ನುರಿತವರೇ ಕೈಗೊಳ್ಳಬೇಕು.
೨. ನೆತ್ತರೊತ್ತಡ, ಹೃದಯಬೇನೆ ಮತ್ತು ನರಮಂಡಲದಲ್ಲಿ ಅಸ್ವಾಸ್ತ್ರಗಳನ್ನು ಹೊಂದಿರುವವರು ಈ ಪ್ರಾಣಾಯಾಮಾಭ್ಯಾಸಕ್ಕೆ ತೊಡಗಬಾರದು. ಏಕೆಂದರೆ, ಇದರಿಂದ ಹೆಚ್ಚು ದುಷ್ಪರಿಣಾಮಗಳುಂಟಾಗಬಹುದು.