ಮೈಸೂರು: ಅಂಗನವಾಡಿ ಕೇಂದ್ರಗಳು ದುರಸ್ತಿ ಪಡಿಸುವುದು ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯದ ಕೊರತೆ ಇದ್ದರೆ ತಕ್ಷಣವೇ ಗಮನಹರಿಸಿ ಪರಿಹರಿಸಲಾಗುವುದು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ವಿಜಯನಗರದ ವಿಭಾಗೀಯ ಸ್ತ್ರೀಶಕ್ತಿ ಭವನದಲ್ಲಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾಮ್‌ಸಂಗ್ ಮೊಬೈಲ್ ಸ್ಮಾರ್ಟ್‌ಫೋನ್ ವಿತರಣಾ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತೆಯರಿಗೆ ಫೋನ್ ವಿತರಿಸಿ ಮಾತನಾಡಿದರು.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಿರುವುದರಿಂದ ಸಾಕಷ್ಟು ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗುತ್ತಿದೆ. ಇಲಾಖೆಯ ಕೆಲಸಗಳು ಸುಗಮವಾಗಿಮಾಡಲು ಮತ್ತು ಮಕ್ಕಳಿಗೆ ಬೇಕಾದ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ. ಮತ್ತಷ್ಟು ಮಾಹಿತಿಯನ್ನು ಅಲವಡಿಸಿಕೊಂಡು ಚೆನ್ನಾಗಿ ಕೆಲಸ ಮಾಡಬೇಕು ಎಂದರು.
ಅಂಗನವಾಡಿಗಳು ದುರಸ್ತಿಗೆ ಬಂದಿದ್ದರೆ ಹೇಳಬೇಕು. ಕುಡಿಯುವ ನೀರು,ಶೌಚಾಲಯದ ವ್ಯವಸ್ಥೆ ಇದ್ದರೆ ನೇರವಾಗಿ ಹೇಳಬಹುದು.ಇಲ್ಲವೇ ಆಯಾಯ ಗ್ರಾಪಂಗಳಿಗೆ ಮಾಹಿತಿ ಕೊಟ್ಟರೆ ಸರಿಯಾಗುತ್ತದೆ. ಮೂಲ ಸೌಕರ್ಯಗಳನ್ನು ಒದಗಿಸಲು ಬೇಕಾದ ಅನುದಾನ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.
ಮಕ್ಕಳಿಗೆ ಕಾರ್ಯಕರ್ತೆಯರು,ಸಹಾಯಕಿಯರು ದೇವರಿದ್ದಂತೆ. ಅದೇ ರೀತಿ ಮಕ್ಕಳನ್ನು ಕಂಡು ಕೆಲಸ ಮಾಡಬೇಕು. ಪ್ರೀತಿ, ವಿಶ್ವಾಸದಿಂದ ಮಕ್ಕಳನ್ನು ಕರೆತಂದು ಅವರನ್ನು ನೋಡಿಕೊಂಡು ವಾಪಸ್ ಕಳುಹಿಸುವುದು ಸುಲಭವಲ್ಲ. ವೇತನಕ್ಕಾಗಿ ಕೆಲಸ ಮಾಡುತ್ತೇವೆ ಅಂತ ಹೇಳಬಹುದು.ಆದರೆ, ಇದೊಂದು ಮಾನವೀಯ ಸೇವೆಯಾಗಿದೆ ಎಂದು ತಿಳಿಸಿದರು.
ಮೊದಲೆಲ್ಲಾ ಆರತಿಗೊಬ್ಬ ಮಗಳು,ಕೀರ್ತಿಗೊಬ್ಬ ಮಗ ಬೇಕು ಎನ್ನುತ್ತಿದ್ದರು. ಆದರೆ, ಇಂದು ಒಂದು ಮಗುವನ್ನು ಸಾಕಲು ಸಾಧ್ಯವಾಗದಂತಾಗಿದೆ. ಒಂದು ಮಗುವನ್ನು ನೋಡಿಕೊಳ್ಳಲು ಆಗೋದಿಲ್ಲ ಅಂತಾರೆ. ಅಂತಹದರಲ್ಲಿ ಹತ್ತಾರು ಮಕ್ಕಳನ್ನು ನೋಡಿಕೊಂಡು ಹಾರೈಕೆಮಾಡುವುದು ಸುಲಭವಲ್ಲ. ಅದಕ್ಕಾಗಿಯೇ ಕಾರ್ಯಕರ್ತೆಯರೇ ದೇವರ ಸಮಾನರಾಗಿದ್ದಾರೆ ಎಂದು ಹೇಳಿದರು.
ನಾನು ಹುಟ್ಟೂರು ಗುಂಗ್ರಾಲ್ ಛತ್ರದ ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುವಾಗ ೧೯೬೯ರಲ್ಲಿ ೧೦೦ರೂ.ವೇತನ ಕೊಡಲಾಗುತ್ತಿತ್ತು. ನೂರು ರೂಪಾಯಿ ಸ್ಯಾಲರಿ ಅಂತ ಅರಿಯದೆ ಸೇವೆ ಎನ್ನುವಂತೆ ಭಾವಿಸಿ ಕೆಲಸ ಮಾಡಿದ ಫಲವಾಗಿ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು. ಕಡಿಮೆ ವೇತನಕ್ಕೆ ಇಷ್ಟೊಂದು ಕೆಲಸ ಮಾಡಬೇಕೆಂಬ ಯೋಚನೆ ಬಿಟ್ಟು ಮಕ್ಕಳ ಸೇವೆ ದೊರೆತಿರುವುದು ಸೌಭಾಗ್ಯ ಅಂದುಕೊಳ್ಳಬೇಕು.
-ಜಿ.ಟಿ.ದೇವೇಗೌಡ, ಶಾಸಕರು.
ಮಹಿಳೆಯರು ಅಬಲೆಯರಲ್ಲ ಸಬಲೆಯರು ಎನ್ನುವುದು ಇಡೀ ಜಗತ್ತಿಗೆ ಗೊತ್ತಾಗಿದೆ. ಸಣ್ಣ ಕೆಲಸದಿಂದ ವಿಮಾನ ಹಾರಾಡಿಸುವ ಫೈಲಟ್‌ಗಳಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ದೇಶದ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅಪಾರವಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ಮಹಿಳೆಯರ ಶೋಷಣೆ,ದೌರ್ಜನ್ಯ ಮತ್ತು ಇನ್ನಿತರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಅಧಿಕಾರಿಗಳು ಕೂಡ ಗ್ರಾಪಂಗೆ ಹೋಗಿ ಸಮಸ್ಯೆಗಳನ್ನು ಆಲಿಸುವಂತೆ ಹೇಳಿದ್ದೇನೆ. ಶಾಲೆ,ಅಂಗನವಾಡಿ ಕಟ್ಟಡಗಳ ನಿರ್ಮಾಣ,ದುರಸ್ತಿ ಇದ್ದರೆ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದೇನೆ. ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ತಿಳಿಸಬಹುದು ಎಂದರು.
ಅರ್ಧಗಂಟೆ ಯೋಗಾಭ್ಯಾಸ ಮಾಡಿ: ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಅರ್ಧ ಗಂಟೆ ಯೋಗಾಭ್ಯಾಸ ಮಾಡಬೇಕು. ಯೋಗ ಬಹಳ ಮುಖ್ಯ.ಆರೋಗ್ಯ, ಮಾನಸಿಕ,ದೈಹಿಕವಾಗಿ ಚೆನ್ನಾಗಿರಲು ಸಹಾಯವಾಗುತ್ತದೆ. ಬೆಳಿಗ್ಗೆ ಎದ್ದು ಪ್ರಾಣಾಯಾಮ, ಧ್ಯಾನ ಮಾಡಬೇಕು. ಇದರಿಂದ ಹುರುಪಿನಿಂದ ಕೆಲಸ ಮಾಡಬಹುದು ಎಂದು ಸಲಹೆ ನೀಡಿದರು.
ಇಲಾಖೆಯ ಕೆಲಸಗಳನ್ನು ಮಾಡುವಾಗ ಒತ್ತಡ ಬರುವುದು ಸಹಜ. ಮೊದಲು ಮಕ್ಕಳನ್ನುಮಾತ್ರ ನೋಡಿಕೊಳ್ಳಬೇಕಿತ್ತು.ಆದರೆ,ಸರ್ಕಾರದ ವಿವಿಧ ಯೋಜನೆಗಳ ಕುರಿತಂತೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಣೆ ಮಾಡಬೇಕಿರುವ ಕಾರಣ ಮಾನಸಿಕವಾಗಿ ಚೆನ್ನಾಗಿ ಇರಬೇಕು ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸುಬ್ಬಯ್ಯ, ತಾಪಂ ಕಾರ್ಯ ನಿರ್ವಹಕಾಧಿಕಾರಿ ಗಿರಿಧರ್ ಹಾಜರಿದ್ದರು.