ಬೆಂಗಳೂರು(Bengaluru): ಆ್ಯಪ್ ಆಧಾರದಲ್ಲಿ ಆಟೋರಿಕ್ಷಾಗಳ ಸೇವೆ ಒದಗಿಸಲು ಮುಂದಿನ 15 ದಿನಗಳಲ್ಲಿ ಪ್ರಯಾಣ ಶುಲ್ಕ ನಿಗದಿಪಡಿಸಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.
ಆ್ಯಫ್ ಆಧಾರಿತ ಓಲಾ ಮತ್ತು ಉಬರ್ ಆಟೋರಿಕ್ಷಾ ಸೇವೆ ಸ್ಥಗಿತಗೊಳಿಸಬೇಕು ಎಂದು ರಾಜ್ಯ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಆದೇಶ ರದ್ದುಪಡಿಸುವಂತೆ ಕೋರಿ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಮತ್ತು ಉಬರ್ ಇಂಡಿಯಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿತು.ಅಲ್ಲದೆ, ಬೆಲೆ ನಿಗದಿ ಪಡಿಸುವ ಸಂದರ್ಭದಲ್ಲಿ ಎಲ್ಲ ಪಾಲುದಾರ ಮನವಿಯನ್ನು ಪರಿಗಣಿಸಬೇಕು ಎಂದು ನ್ಯಾಯಪೀಠ ಸರ್ಕಾರಕ್ಕೆ ಸಲಹೆ ನೀಡಿದೆ. ಅಲ್ಲಿಯವರೆಗೂ ಅಗ್ರಿಗೇಟರ್ಸಗಳ ವಿರುದ್ದ ಯಾವುದೇ ಬಲವಂತದ ಕ್ರಮಕ್ಕೆ ಮುಂದಾಗಬಾರದು ಎಂದು ಹೈಕೋರ್ಟ್ ಸರ್ಕಾರಕ್ಕೆ ನಿರ್ದೇಶಿಸಿದೆ.
ಓಲಾ, ಉಬರ್ ಮತ್ತು ರಾಪಿಡೊ ಕಂಪನಿಗಳ ಆ್ಯಪ್‌ಗಳಲ್ಲಿ ಆಟೋ ಸೇವೆ ಅಕ್ಟೋಬರ್ 12ರಿಂದ ಸ್ಥಗಿತವಾಗಿದೆ. ಅಕ್ಟೋಬರ್ 11ರಂದು ಶಾಂತಿನಗರದ ಸಾರಿಗೆ ಇಲಾಖೆಯಲ್ಲಿ ಓಲಾ ಮತ್ತು ಉಬರ್ ಕಂಪನಿಗಳ ಪ್ರತಿನಿಧಿಗಳ ಜತೆ ಸಭೆ ನಡೆಸಿದ ಬಳಿಕ ಮಾತನಾಡಿದ ಸಾರಿಗೆ ಆಯುಕ್ತ ಟಿಎಚ್ಎಂ ಕುಮಾರ್, ನಿಯಮದ ಪ್ರಕಾರ ಆಟೋ ಸೇವೆ ಒದಗಿಸಲು ಈ ಕಂಪನಿಗಳಿಗೆ ಅನುಮತಿ ಇಲ್ಲ.ಈ ಸಂಬಂಧ ಸಭೆಯಲ್ಲಿ ಸಂಸ್ಥೆಗಳಿಗೆ ಮನವರಿಕೆ ಮಾಡಿಕೊಡಲಾಗಿದೆ.
ಸಂಸ್ಥೆಗಳಿಗೆ ಆಟೋ ಸೇವೆಯನ್ನು ಆ್ಯಪ್ನಿಂದ ತೆಗೆಯಲು ಸೂಚಿಸಲಾಗಿದೆ. ಒಂದು ವೇಳೆ, ಸೂಚನೆ ಪಾಲಿಸದೇ ಇದ್ದರೆ ಐದು ಸಾವಿರ ದಂಡ ಮತ್ತು ಸೈಬರ್ ಕ್ರೈಂ ಠಾಣೆಗೆ ದೂರು ನೀಡಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.