ಯಳಂದೂರು: ಗ್ರಾಮೀಣ ಪತ್ರಕರ್ತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರ್ಕಾರ ಇವರ ನೆರವಿಗೆ ಬರಬೇಕು ಎಂದು ಯಳಂದೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಉಸ್ತುವಾರಿ ಸಚಿವರು ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮಲೆಮಹದೇಶ್ವರ ಬೆಟ್ಟದ ನಾಗಮಲೆ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಹಾಗೂ ಹನೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪತ್ರಕರ್ತರ ಮಕ್ಕಳಿಗೆ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ವಸತಿ ಹಾಗೂ ನಿವೇಶನ ನೀಡುವುದು, ಗ್ರಾಮೀಣ ಪತ್ರಕರ್ತರಿಗೆ ನೀಡಿರುವ ಜಿಲ್ಲಾ ವ್ಯಾಪ್ತಿಗೆ ಸಿಮೀತಗೊಂಡಿರುವ ಉಚಿತ ಬಸ್ ಪಾಸ್‌ನ್ನು ಕರ್ನಾಟಕ ರಾಜ್ಯಾದ್ಯಂತ ಎಲ್ಲೆಡೆ ಓಡಾಡಲು ವಿಸ್ತರಣೆ ಮಾಡಬೇಕು, ಗ್ರಾಮೀಣ ಪತ್ರಕರ್ತರಿಗೆ ಉಚಿತ ಆರೋಗ್ಯ ಸೇವೆ ಹಾಗೂ ವಿಮೆ ಸೌಲಭ್ಯ ಕಲ್ಪಿಸುವುದು. ಗ್ರಾಮೀಣ ಪ್ರದೇಶದ ಪತ್ರಕರ್ತರಿಗೆ ಕಂಪ್ಯೂಟರ್, ಲ್ಯಾಪ್‌ಟಾಪ್, ಆಂಡ್ರಾಯ್ಡ್ ಮೊಬೈಲ್ ನೀಡುವುದು, ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ವಿಶೇಷ ಸ್ಕಾಲರ್‌ಶಿಪ್ ನೀಡಿ ಶಿಕ್ಷಣದ ಪ್ರೋತ್ಸಾಹಕ್ಕೆ ಆದ್ಯತೆ ನೀಡಬೇಕು. ಜಿಲ್ಲಾ ಮಟ್ಟದ ಪತ್ರಕರ್ತರಿಗೆ ನೀಡುವ ನಿವೃತ್ತಿ ವೇತನವನ್ನು ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ವಿಸ್ತರಣೆ ಮಾಡಬೇಕು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಸರ್ಕಾರದ ಕಾರ್ಯಕ್ರಮಗಳಿಗೆ ಜಿಲ್ಲಾ ಮಟ್ಟದ ಪತ್ರಕರ್ತರಿಗೆ ಮಾತ್ರ ಕಾರ್ಯಕ್ರಮದಲ್ಲಿ ವಾಹನ ಕಲ್ಪಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ, ಆದರೆ ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಈ ಸೌಲಭ್ಯ ಇಲ್ಲ, ಆದ್ದರಿಂದ ಈ ಸೌಲಭ್ಯವನ್ನು ತಾಲ್ಲೂಕು ಮಟ್ಟಕ್ಕೂ ವಿಸ್ತರಣೆ ಮಾಡುವ ಮೂಲಕ ಅನುಕೂಲ ಕಲ್ಪಿಸಬೇಕು. ರಾಜ್ಯದ ಎಲ್ಲಾ ಪತ್ರಕರ್ತರ ಆರ್ಥಿಕ ಪರಿಸ್ಥಿತಿ ನೈಜತೆ ತಿಳಿಯುವಲ್ಲಿ ರಾಜ್ಯ ಸರ್ಕಾರ ಪತ್ರಕರ್ತರ ಗಣತಿ ಮಾಡಿ ಅವರ ಆರ್ಥಿಕ ಸ್ಥಿತಿ, ಗತಿ, ಜೀವನ ನಿರ್ವಹಣೆ ಮಟ್ಟ, ಸೌಕರ್ಯಗಳ ಮಾಹಿತಿ ಸಂಗ್ರಹಿಸಿ ಅರ್ಹ ಬಡ ವರ್ಗದ ಪತ್ರಕರ್ತರಿಗೆ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕೆಂದು ಮನವಿ ಸಲ್ಲಿಸಲಾಯಿತು.
ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್, ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್, ಶಾಸಕರಾದ ಮಂಜುನಾಥ್, ಎ.ಆರ್. ಕೃಷ್ಣಮೂರ್ತಿ ಸಾಲೂರು ಮಠದ ಶಾಂತಮಲ್ಲಿಕಾರ್ಜುಸ್ವಾಮಿಜಿ, ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ.ರಘು, ಬಿಜೆಪಿ ಮುಖಂಡ ನಿಶಾಂತ್ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಜಿಲ್ಲಾಧ್ಯಕ್ಷ ದೇವರಾಜಕಪ್ಪಸೋಗೆ, ಹನೂರು ತಾಲೂಕು ಅಧ್ಯಕ್ಷ ಮಹದೇಶ್, ಯಳಂದೂರು ತಾಲೂಕು ಅಧ್ಯಕ್ಷ ಅಂಬಳೆ ವೀರಭದ್ರನಾಯಕ, ಕಾರ್ಯದರ್ಶಿ ಡಿ.ಪಿ.ಮಹೇಶ್, ಯರಿಯೂರು ನಾಗೇಂದ್ರ, ಫೈರೋಜ್ ಖಾನ್, ವೈ.ಕೆ.ಮೋಳೆ ನಾಗರಾಜು, ವೈ.ಎಂ. ಭಾನುಪ್ರಕಾಶ್, ಮದ್ದೂರು ಮಂಜುನಾಥ್, ಕೆಸ್ತೂರು ಪ್ರಸನ್ನ, ಬೂದಂಬಳ್ಳಿ ಗಿರೀಶ್ ಸೇರಿದಂತೆ ಅನೇಕರು ಇದ್ದರು.














