ಮನೆ ರಾಜ್ಯ ಟಿಟಿಡಿಗೆ ನೇಮಕ: ವಿಶ್ವನಾಥ್ ಸಂತಸ

ಟಿಟಿಡಿಗೆ ನೇಮಕ: ವಿಶ್ವನಾಥ್ ಸಂತಸ

0

ಬೆಂಗಳೂರು: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂನ ಆಡಳಿತ ಮಂಡಳಿ ಸದಸ್ಯರನ್ನಾಗಿ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಎರಡನೇ ಅವಧಿಗೆ ನೇಮಕ ಮಾಡಲಾಗಿದೆ.

ಈ ಸಂಬಂಧ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಕಚೇರಿ ಆದೇಶ ಹೊರಡಿಸಿದೆ.

ಮತ್ತೊಂದು ಅವಧಿಗೆ ಆಡಳಿತ ಮಂಡಳಿ ಸದಸ್ಯರನ್ನಾಗಿ ನೇಮಕವಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಎಸ್.ಆರ್.ವಿಶ್ವನಾಥ್ ಅವರು, ಈ ನೇಮಕಕ್ಕೆ ಕಾರಣರಾದ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ಹಿರಿಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

ತಿರುಪತಿ ಶ್ರೀ ವೆಂಕಟೇಶ್ವರ ದೇವರ ಸೇವೆ ಮಾಡಲು ನನಗೆ ಇಂತಹ ಅವಕಾಶ ಸಿಕ್ಕಿರುವುದು ಅತೀವ ಸಂತಸ ತಂದಿದೆ. ಇದಕ್ಕೆ ನನ್ನ ಮತ ಕ್ಷೇತ್ರದ ಜನತೆ, ಅಪಾರ ಸಂಖ್ಯೆಯ ಭಕ್ತರ ಆಶೀರ್ವಾದ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಮೊದಲ ಬಾರಿಗೆ ಸದಸ್ಯನಾಗಿ ನೇಮಕವಾಗಿ ಕಳೆದ ಎರಡು ವರ್ಷಗಳಲ್ಲಿ ಯಲಹಂಕ ಕ್ಷೇತ್ರವಷ್ಟೇ ಅಲ್ಲ, ಕರ್ನಾಟಕ ರಾಜ್ಯದ ವಿವಿಧ ಮೂಲೆಗಳ ಭಕ್ತರಿಗೆ ತಿರುಪತಿ ತಿಮ್ಮಪ್ಪನ ದರ್ಶನದ ವ್ಯವಸ್ಥೆಯನ್ನು ಮಾಡಿಕೊಟ್ಟಿದ್ದೇನೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ತಿರುಮಲದಲ್ಲಿ ಕರ್ನಾಟಕದ ಭಕ್ತರು ಉಳಿದುಕೊಳ್ಳಲು ವಿಶಾಲವಾದ ವಸತಿ ಗೃಹವನ್ನು ಪುನರ್ ನಿರ್ಮಾಣ ಮಾಡುವ ಯೋಜನೆಗೆ ಅನುಮೋದನೆ ಪಡೆದುಕೊಳ್ಳಲಾಗಿತ್ತು. ಇದರ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಸದ್ಯದಲ್ಲೇ ಕರ್ನಾಟಕದ ಯಾತ್ರಾರ್ಥಿಗಳು ಉಳಿದುಕೊಳ್ಳಲು ಸಾಧ್ಯವಾಗಲಿದೆ ಎಂದರು.

ಕರ್ನಾಟಕದ ಭಕ್ತರಿಗೆ ಯಾವುದೇ ತೊಂದರೆ ಇಲ್ಲದಂತೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಇನ್ನೂ ಹಲವಾರು ಕ್ರಮಗಳನ್ನು ಕೈಗೊಳ್ಳಲು ನಾನು ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ. ಈ ಮೂಲಕ ಟಿಟಿಡಿ ಮತ್ತು ಕರ್ನಾಟಕದ ಭಕ್ತರ ನಡುವಿನ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಲಿದ್ದೇನೆ ಎಂದು ಅವರು ತಿಳಿಸಿದರು.

ಎಲ್ಲರಿಗೂ ಇಂತಹ ಅದೃಷ್ಠ ಒಲಿಯುವುದಿಲ್ಲ. ನನ್ನ ಮತ ಕ್ಷೇತ್ರದ ಜನತೆ ಮತ್ತು ಹಿರಿಯರ ಆಶೀರ್ವಾದದಿಂದ ಹತ್ತಿರದಿಂದ ಎರಡನೇ ಬಾರಿ ಶ್ರೀ ವೆಂಕಟೇಶ್ವರನ ಸೇವೆಯನ್ನು ಸಲ್ಲಿಸಲು ಅವಕಾಶ ನನಗೆ ಲಭಿಸಿದೆ. ಈ ಅವಕಾಶವನ್ನು ಶ್ರದ್ಧಾಭಕ್ತಿಯಿಂದ ಬಳಸಿಕೊಂಡು ದೇವರ ಕಾಯಕ ಮಾಡುವುದಾಗಿ ಅವರು ಹೇಳಿದರು.

ಹಿಂದಿನ ಲೇಖನವೇಣೂರು: ಖಾಸಗಿ ಬಸ್ ಪಲ್ಟಿ, ಹಲವು ಮಂದಿಗೆ ಗಾಯ
ಮುಂದಿನ ಲೇಖನಲಕ್ನೋದಿಂದ ರಾಮೇಶ್ವರಂಗೆ ತೆರಳುತ್ತಿದ್ದ ಪ್ರವಾಸಿ ರೈಲಿನ ಕೋಚ್‌ ನಲ್ಲಿ ಅಗ್ನಿ ಅವಘಡ: 9 ಮಂದಿ ಸಾವು, ಹಲವರಿಗೆ ಗಾಯ