ಸುಪ್ರೀಂ ಕೋರ್ಟ್ ಗೆ ಐವರು ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳ (ಎಎಜಿ) ನೇಮಕಾತಿ ಸೇರಿದಂತೆ ಒಟ್ಟು 15 ಮಂದಿ ಎಎಜಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿ ರಾಜ್ಯ ಸರ್ಕಾರವು ಸೋಮವಾರ ಅಧಿಸೂಚನೆ ಪ್ರಕಟಿಸಿದೆ.
ಕರ್ನಾಟಕ ಹೈಕೋರ್ಟ್ ನ ಬೆಂಗಳೂರು ಪ್ರಧಾನ ಪೀಠಕ್ಕೆ ಐವರು, ಕಲಬುರ್ಗಿ ಪೀಠಕ್ಕೆ ಮೂವರು ಮತ್ತು ಧಾರವಾಡ ಪೀಠಕ್ಕೆ ಇಬ್ಬರು ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳನ್ನು ನೇಮಕ ಮಾಡಲಾಗಿದೆ. ಒಟ್ಟು 15 ಎಎಜಿಗಳ ಪೈಕಿ ಏಕೈಕ ಮಹಿಳಾ ವಕೀಲೆ ಎಎಜಿಯಾಗಿ ನೇಮಕಗೊಂಡಿದ್ದಾರೆ.
ವಕೀಲರಾದ ನಿಶಾಂತ್ ಪಾಟೀಲ್, ಮೊಹಮ್ಮದ್ ಅಲಿ ಖಾನ್, ಪ್ರತೀಕ್ ಛಡ್ಡಾ, ಅವಿಷ್ಕಾರ್ ಸಿಂಘ್ವಿ ಮತ್ತು ಅಮನ್ ಪನ್ವಾರ್ ಅವರು ಸುಪ್ರೀಂ ಕೋರ್ಟ್ ನಲ್ಲಿ ಎಎಜಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಸುಪ್ರೀಂ ಕೋರ್ಟ್ ನಲ್ಲಿ ವಕೀಲರಾದ ನಿಖಿಲ್ ಗೋಯಲ್ ಅವರ ಸ್ಥಾನವನ್ನು ನಿಶಾಂತ್ ಪಾಟೀಲ್ ತುಂಬಲಿದ್ದಾರೆ.
ಕರ್ನಾಟಕ ಹೈಕೋರ್ಟ್ ನ ಬೆಂಗಳೂರಿನ ಪ್ರಧಾನ ಪೀಠದಲ್ಲಿ ಎಎಜಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ಕೋಶದ ಹಂಗಾಮಿ ಅಧ್ಯಕ್ಷರಾಗಿರುವ ಎಸ್ ಎ ಅಹ್ಮದ್, ವಕೀಲರಾದ ಸಿ ಎಸ್ ಪ್ರದೀಪ್, ರೊಬೆನ್ ಜಾಕೋಬ್, ವಿ ಜಿ ಭಾನುಪ್ರಕಾಶ್, ಕಿರಣ್ ರೋಣ ಕಾರ್ಯನಿರ್ವಹಿಸಲಿದ್ದಾರೆ.
ಧಾರವಾಡ ಪೀಠದಲ್ಲಿ ಜೆ ಎಂ ಗಂಗಾಧರ ಮತ್ತು ಕೇಶವ ರೆಡ್ಡಿ, ಕಲಬುರ್ಗಿ ಪೀಠದಲ್ಲಿ ಮಲ್ಹಾರ ರಾವ್, ವೈ ಎಚ್ ವಿಜಯಕುಮಾರ್ ಹಾಗೂ ಅರ್ಚನಾ ಬಿ. ತಿವಾರಿ ಅವರು ಎಎಜಿಗಳಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಕಾನೂನು ಇಲಾಖೆಯ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.