ಮೈಸೂರು(Mysuru): ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಮೃತ ಸರೋವರದಡಿ ನಂಜನಗೂಡು ತಾಲ್ಲೂಕಿನಲ್ಲಿ ಅಭಿವೃದ್ಧಿ ಪಡಿಸಿದ ಕೆರೆ ಹಾಗೂ ಇತರೆ ಕಾಮಗಾರಿಗಳನ್ನು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಅಭಿಯಂತರರಾದ ಸಿ.ಕೆ.ಮಲ್ಲಪ್ಪ ಅವರು ಪರಿಶೀಲಿಸಿ, ಮೆಚ್ಚುಗೆ ವ್ಯಕ್ತಪಡಿಸಿದರು.
ಬುಧವಾರ ತಾಲ್ಲೂಕಿಗೆ ಭೇಟಿ ನೀಡಿದ ಅವರು, ಮೊದಲು ನಲ್ಲಿತಾಳಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿಗೊಂಡ ರಾಮಯ್ಯನ ಕಟ್ಟೆ ವೀಕ್ಷಿಸಿ, ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ ಹೊರತು ಪಡಿಸಿದರೆ ಅಭಿವೃದ್ಧಿ ಕಾರ್ಯ ಉತ್ತಮವಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿ ತಾಂತ್ರಿಕ ಸಲಹೆ ನೀಡಿದರು. ಬಳಿಕ ಮಾತನಾಡಿದ ಅವರು, ಕೆರೆಯಲ್ಲಿ ನೀರು ತುಂಬಿದ ಬಳಿಕ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ನೆರೆದಿದ್ದ ಗ್ರಾಮಸ್ಥರಿಗೆ ತಿಳಿಸಿದರು. ನಂತರ ಪ್ರಗತಿ ಹಂತದಲ್ಲಿದ್ದ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಪರಿಶೀಲಿಸಿದರು.
ಬಳಿಕ ದೇವಿರಮ್ಮನಹಳ್ಳಿ ಗ್ರಾಮ ಪಂಚಾಯಿಗೆ ಭೇಟಿ ನೀಡಿ, ಕಳೆದ ಸಾಲಿನಲ್ಲಿ ನಿರ್ಮಾಣಗೊಂಡ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ವೀಕ್ಷಿಸಿದ ಅವರು, ಕಟ್ಟಡವು ವೈಜ್ಞಾನಿಕ ರೀತಿಯಲ್ಲಿ ಕಟ್ಟಲಾಗಿದೆ. ಪಿ.ಡಿ.ಓ ಕೊಠಡಿ, ಸಭಾ ಕೋಣೆಯು ಸುಸಜ್ಜಿತವಾಗಿ ಕಟ್ಟಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು. ಬಳಿಕ ಮಸಗೆ ಗ್ರಾಮದ ಅಮೃತ ಸರೋವರದಡಿ ಅಭಿವೃದ್ಧಿಗೊಳ್ಳಲಿರುವ ಕೆರೆಗೆ ಭೇಟಿ ನೀಡಿ, ಶೀಘ್ರದಲ್ಲೇ ನಿಯಮಾನುಸಾರ ಕೆರೆಯನ್ನು ಅಭಿವೃದ್ಧಿ ಪಡಿಸುವಂತೆ ತಾಂತ್ರಿಕ ಸಂಯೋಜಕರು ಹಾಗೂ ಸಂಬAಧಿಸಿದ ತಾಂತ್ರಿಕ ಸಹಾಯಕ ಇಂಜಿನಿಯರ್ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ನರೇಗಾ ಸಹಾಯಕ ನಿರ್ದೇಶಕರಾದ ಪುರುಷೋತ್ತಮ, ತಾಂತ್ರಿಕ ಸಂಯೋಜಕರು, ತಾಲ್ಲೂಕಿನ ಎಲ್ಲಾ ತಾಂತ್ರಿಕ ಸಹಾಯಕ ಇಂಜಿನಿಯರ್, ಐ.ಇ.ಸಿ ಸಂಯೋಜಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಅಧ್ಯಕ್ಷರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.