ಮನೆ ರಾಷ್ಟ್ರೀಯ ನಿಮ್ಹಾನ್ಸ್‌ ಪಾಲಿಟ್ರಾಮಾ ಕೇಂದ್ರಕ್ಕೆ ಅನುಮೋದನೆ: ಹಣಕಾಸು ಸಚಿವರಿಗೆ ಸಂಸದ ಡಾ.ಸಿ.ಎನ್‌. ಮಂಜುನಾಥ್ ಮನವಿ

ನಿಮ್ಹಾನ್ಸ್‌ ಪಾಲಿಟ್ರಾಮಾ ಕೇಂದ್ರಕ್ಕೆ ಅನುಮೋದನೆ: ಹಣಕಾಸು ಸಚಿವರಿಗೆ ಸಂಸದ ಡಾ.ಸಿ.ಎನ್‌. ಮಂಜುನಾಥ್ ಮನವಿ

0

ನವದೆಹಲಿ: ನಿಮ್ಹಾನ್ಸ್‌ನ ಬೆಂಗಳೂರು ಉತ್ತರ ಕ್ಯಾಂಪಸ್‌ನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ 300 ಹಾಸಿಗೆಗಳ ಸಾಮರ್ಥ್ಯದ ಪಾಲಿಟ್ರಾಮಾ ಕೇಂದ್ರದ ಪ್ರಸ್ತಾವಕ್ಕೆ ಶೀಘ್ರವೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿ ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್‌. ಮಂಜುನಾಥ್ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

Join Our Whatsapp Group

ನಿಮ್ಹಾನ್ಸ್‌ ಆರಂಭವಾದಾಗ ಪ್ರತಿದಿನ ಅಲ್ಲಿಗೆ ಬರುವ ರೋಗಿಗಳ ಸಂಖ್ಯೆ 250ರಷ್ಟು ಇತ್ತು. ಆದರೆ, ಈಗ ಆ ಸಂಖ್ಯೆ 2,500ಕ್ಕಿಂತಲೂ ಹೆಚ್ಚು. ದೇಶದಲ್ಲಿ ಸಂಭವಿಸುವ ಸಾವುಗಳಿಗೆ ರಸ್ತೆ ಅಪಘಾತವು ಐದನೇ ಅತಿದೊಡ್ಡ ಕಾರಣವಾಗಿದೆ. ಅಪಘಾತಗಳಲ್ಲಿ ತೀವ್ರವಾಗಿ ಗಾಯಗೊಂಡವರಿಗೆ ‘ಗೋಲ್ಡನ್‌ ಅವರ್‌’ನಲ್ಲಿಯೇ ಚಿಕಿತ್ಸೆ ನೀಡಿದರಷ್ಟೇ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದರೆ, ಜಾಗದ ಕೊರತೆ ಮತ್ತು ಪಾಲಿಟ್ರಾಮಾ ಕೇಂದ್ರ ಇಲ್ಲದೇ ಇರುವುದರಿಂದ ಹಲವು ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸಲಾಗುತ್ತಿದೆ. ಹೀಗಾಗಿ, ಕೇಂದ್ರ ಸ್ಥಾಪನೆಗೆ ಶೀಘ್ರ ಅನುಮೋದನೆ ನೀಡಬೇಕು ಎಂದು ಅವರು ಆಗ್ರಹಿಸಿದರು.

ಈ ಕೇಂದ್ರದ ಸ್ಥಾಪನೆಗೆ ರಾಜ್ಯ ಸರ್ಕಾರವು ಈಗಾಗಲೇ ಭೂಮಿ ಮಂಜೂರು ಮಾಡಿದೆ. ಪಾಲಿಟ್ರಾಮಾ ಕೇಂದ್ರದ ವಿನ್ಯಾಸವನ್ನು ಒಳಗೊಂಡ ಪ್ರಸ್ತಾವವನ್ನು ಹಲವು ಬಾರಿ ಪರಿಷ್ಕರಿಸಲಾಗಿದೆ. ಅದಕ್ಕೆ ಸಂಸ್ಥೆಯ ಆಡಳಿತ ಮಂಡಳಿಯೂ ಒಪ್ಪಿಗೆ ನೀಡಿದೆ’ ಎಂದು ಅವರು ತಿಳಿಸಿದರು. ‘ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದು ಅವರು ತಿಳಿಸಿದರು.