ಮನೆ ರಾಷ್ಟ್ರೀಯ ಭಾರತೀಯ ಸೇನೆಗೆ ಮೌಲ್ಯದ ‘ಆಧುನಿಕ ಶಸ್ತ್ರಾಸ್ತ್ರ’ ಖರೀದಿಗೆ ಅನುಮೋದನೆ..!

ಭಾರತೀಯ ಸೇನೆಗೆ ಮೌಲ್ಯದ ‘ಆಧುನಿಕ ಶಸ್ತ್ರಾಸ್ತ್ರ’ ಖರೀದಿಗೆ ಅನುಮೋದನೆ..!

0

ನವದೆಹಲಿ : ಸೇನೆಯ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸಲು 79,000 ಕೋಟಿ ರೂ. ಮೌಲ್ಯದ ದೀರ್ಘ ಶ್ರೇಣಿಯ ರಾಕೆಟ್‌ಗಳು, ಕ್ಷಿಪಣಿಗಳು, ರಾಡಾರ್ ವ್ಯವಸ್ಥೆಗಳು ಸೇರಿದಂತೆ ವಿವಿಧ ಮಿಲಿಟರಿ ಸಲಕರಣೆಗಳ ಖರೀದಿಗೆ ರಕ್ಷಣಾ ಸಚಿವಾಲಯ ಸೋಮವಾರ ಅನುಮೋದನೆ ನೀಡಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಸ್ವಾಧೀನ ಮಂಡಳಿ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಿದೆ. ಭಾರತೀಯ ಸೇನೆಯ ಆರ್ಟಿಲರಿ ರೆಜಿಮೆಂಟ್‌ಗಳಿಗೆ ‘ಲಾಯ್ಟರ್ ಮ್ಯೂನಿಷನ್ ಸಿಸ್ಟಮ್’ ಖರೀದಿಗೆ ಅನುಮೋದನೆ ದೊರೆತಿದೆ. ಇದು ಯುದ್ಧದ ವೇಳೆ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸಲು ಸಹಕಾರಿಯಾಗಲಿದೆ.

ಇದರೊಂದಿಗೆ, ಚಿಕ್ಕ ಗಾತ್ರದ ಹಾಗೂ ಕಡಿಮೆ ಎತ್ತರದಲ್ಲಿ ಹಾರುವ ಡ್ರೋನ್‌ಗಳನ್ನು ಪತ್ತೆಹಚ್ಚಲು ‘ಲೋ ಲೆವೆಲ್ ಲೈಟ್ ವೇಟ್ ರಾಡಾರ್‌’ಗಳನ್ನು ಖರೀದಿಸಲಾಗುತ್ತದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಅಲ್ಲದೆ, ಪಿನಾಕಾ ರಾಕೆಟ್ ವ್ಯವಸ್ಥೆಯ ವ್ಯಾಪ್ತಿ ಮತ್ತು ನಿಖರತೆಯನ್ನು ಹೆಚ್ಚಿಸಲು ‘ಲಾಂಗ್ ರೇಂಜ್ ಗೈಡೆಡ್ ರಾಕೆಟ್’ಗಳ ಖರೀದಿಗೆ ಅನುಮೋದನೆ ನೀಡಲಾಗಿದೆ. ಸೇನೆಯ ಪ್ರಮುಖ ನೆಲೆಗಳ ರಕ್ಷಣೆಗಾಗಿ ಸುಧಾರಿತ ಶ್ರೇಣಿಯ ‘ಇಂಟಿಗ್ರೇಟೆಡ್ ಡ್ರೋನ್ ಡಿಟೆಕ್ಷನ್ ಮತ್ತು ಇಂಟರ್‌ಡಿಕ್ಷನ್ ಸಿಸ್ಟಮ್ ಎಂಕೆ-II’ ಅನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ.

ಭಾರತೀಯ ನೌಕಾಪಡೆಗೆ ಹೈ ಫ್ರೀಕ್ವೆನ್ಸಿ ಸಾಫ್ಟ್‌ವೇರ್ ಡಿಫೈನ್ಡ್ ರೇಡಿಯೋಗಳು ಮತ್ತು ಹೈ ಆಲ್ಟಿಟ್ಯೂಡ್ ಲಾಂಗ್ ರೇಂಜ್ ರಿಮೋಟ್ಲಿ ಪೈಲೆಟೆಡ್ ಏರ್‌ಕ್ರಾಫ್ಟ್ ಸಿಸ್ಟಮ್‌ಗಳನ್ನು ಗುತ್ತಿಗೆಗೆ ಪಡೆಯಲು ಅನುಮೋದನೆ ನೀಡಲಾಗಿದೆ. ಇದು ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಿರಂತರ ಕಣ್ಗಾವಲು ಮತ್ತು ಗುಪ್ತಚರ ಮಾಹಿತಿ ಸಂಗ್ರಹಣೆಗೆ ನೌಕಾಪಡೆಗೆ ನೆರವಾಗಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ಭಾರತೀಯ ವಾಯುಪಡೆಗೆ ‘ಸ್ವಯಂಚಾಲಿತ ಟೇಕ್-ಆಫ್ ಲ್ಯಾಂಡಿಂಗ್ ರೆಕಾರ್ಡಿಂಗ್ ಸಿಸ್ಟಮ್’ ಖರೀದಿಗೆ ಅನುಮೋದನೆ ನೀಡಲಾಗಿದ್ದು, ಇದು ವಿಮಾನಗಳ ಸುರಕ್ಷತೆಯನ್ನು ಹೆಚ್ಚಿಸಲಿದೆ. ಯುದ್ಧ ವಿಮಾನಗಳ ಸಾಮರ್ಥ್ಯ ಹೆಚ್ಚಿಸಲು ಸುಧಾರಿತ ಶ್ರೇಣಿಯ ‘ಅಸ್ತ್ರ ಎಂ-II’ ಕ್ಷಿಪಣಿಗಳನ್ನು ಖರೀದಿಸಲಾಗುತ್ತಿದೆ. ಜೊತೆಗೆ, ತೇಜಸ್ ಲಘು ಯುದ್ಧ ವಿಮಾನಗಳ ಪೈಲಟ್‌ಗಳಿಗೆ ಸುರಕ್ಷಿತ ತರಬೇತಿ ನೀಡಲು ‘ಫುಲ್ ಮಿಷನ್ ಸಿಮ್ಯುಲೇಟರ್’ ಮತ್ತು ವಾಯುಪಡೆಯ ನಿಖರ ದಾಳಿ ಸಾಮರ್ಥ್ಯ ಹೆಚ್ಚಿಸಲು ‘ಸ್ಪೈಸ್-1000’ ಗೈಡೆನ್ಸ್ ಕಿಟ್‌ಗಳ ಖರೀದಿಗೆ ಒಪ್ಪಿಗೆ ನೀಡಲಾಗಿದೆ.

ಅಸ್ತ್ರ Mk-II ಕ್ಷಿಪಣಿಗಳು ಸಂಘರ್ಷದ ಸಂದರ್ಭದಲ್ಲಿ ಎದುರಾಳಿ ವಿಮಾನಗಳನ್ನು ನಾಶಪಡಿಸಲು ಯುದ್ಧ ವಿಮಾನದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಲಘು ಯುದ್ಧ ವಿಮಾನ ತೇಜಸ್‌ಗಾಗಿ ಪರಿಣಾಮಕಾರಿ ಮತ್ತು ಸುರಕ್ಷಿತ ರೀತಿಯಲ್ಲಿ ಪೈಲಟ್‌ಗಳ ತರಬೇತಿಯನ್ನು ಹೆಚ್ಚಿಸಲಾಗುತ್ತಿದೆ. SPICE-1000 ಭಾರತೀಯ ವಾಯುಪಡೆಯ ದೀರ್ಘ ಶ್ರೇಣಿಯ ಹಾಗೂ ನಿಖರವಾದ ಹೋರಾಟದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಸಚಿವಾಲಯ ತಿಳಿಸಿದೆ.