ಮನೆ ಮನರಂಜನೆ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಆರಂಭ’ ಸಿನಿಮಾ

ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಆರಂಭ’ ಸಿನಿಮಾ

0

ಈಗಾಗಲೇ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಪೂರ್ಣಗೊಳಿಸಿರುವ “ಆರಂಭ’ ಸಿನಿಮಾದಲ್ಲಿ ಉತ್ತರ ಕರ್ನಾಟಕ ಮೂಲದ ಮಂಜುನಾಥ ಪಿ. ಬಡಿಗೇರ್‌ ನಾಯಕನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

Join Our Whatsapp Group

ಉಳಿದಂತೆ ಪೃಥ್ವಿರಾಜ್‌, ನಿಶ್ಚಿತಾ ಶೆಟ್ಟಿ, ಗಣೇಶ್‌ ರಾವ್‌ ಕೇಸರ್ಕರ್‌, ಕುಮಾರ್‌ ಬೋರಕ್ಕನವರ್‌, ದಿವ್ಯಾ, ರಘು ವದ್ದಿ, ಪ್ರಶಾಂತಂ, ಪ್ರಭು ಹಿರೇಮಠ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸೆನ್ಸಾರ್‌ನಿಂದಲೂ “ಆರಂಭ’ ಸಿನಿಮಾದ ಬಿಡುಗಡೆಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದ್ದು, ಇತ್ತೀಚೆಗೆ ಚಿತ್ರತಂಡ ಟ್ರೇಲರ್‌ ಅನ್ನು ಬಿಡುಗಡೆ ಮಾಡಿದೆ.

 “ಆರಂಭ’ ಸಿನಿಮಾದ ಬಗ್ಗೆ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ಮಂಜುನಾಥ್‌ ಪಿ. ಬಡಿಗೇರ್‌, “ಸಮಾಜಕ್ಕೆ ಉಪಯೋಗವಾಗುವಂಥ ಸಾಧನೆ ಮಾಡಲು ಹುಡುಗಿಯೊಬ್ಬಳು ಮುಂದಾಗುತ್ತಾಳೆ. ಈ ಕೆಲಸದಲ್ಲಿ ಆಕೆ ನಿಗೂಢವಾಗಿ ಕೊಲೆಯಾಗುತ್ತಾಳೆ. ಹುಡುಗಿಗೆ ಸಹಾಯ ಮಾಡಲು ಹೋಗಿ ಅವಳ ಜೊತೆಗಿರುವ ಇಬ್ಬರು ಹುಡುಗರು ಈ ಕೊಲೆಯಲ್ಲಿ ಸಿಲುಕಿಕೊಳ್ಳುತ್ತಾರೆ. ಕೊನೆಗೆ ಇದರಿಂದ ಆ ಹುಡುಗರು ಹೊರಗೆ ಬರುತ್ತಾರಾ? ಇಲ್ಲವಾ? ಸಾಧನೆಯ ಹಿಂದೆ ಹೊರಟ ಹುಡುಗಿಗೆ ಏನಾಗುತ್ತದೆ ಎಂಬುದೇ ಸಿನಿಮಾದ ಕಥೆಯ ಎಳೆ’ ಎಂದು ಕಥಾಹಂದರದ ಬಗ್ಗೆ ಮಾಹಿತಿ ನೀಡಿದರು.

ಟ್ರೇಲರ್‌ ಬಿಡುಗಡೆ ವೇಳೆ ಹಾಜರಿದ್ದ ಚಿತ್ರದ ಕಲಾವಿದರು, ತಂತ್ರಜ್ಞರು ಸಿನಿಮಾದ ಅನುಭವಗಳನ್ನು ಹಂಚಿಕೊಂಡರು. ಸುಮಾರು ಮೂರು ವರ್ಷಗಳ ಹಿಂದೆ ಶುರುವಾದ “ಆರಂಭ’ ಸಿನಿಮಾ ಕೋವಿಡ್‌ ಮತ್ತಿತರ ಕಾರಣಗಳಿಂದ ತೆರೆಗೆ ಬರಲು ತಡವಾಯಿತು. ಈಗಾಗಲೇ ಸಿನಿಮಾಕ್ಕೆ ಸೆನ್ಸಾರ್‌ ಅನುಮತಿ ಕೂಡ ಸಿಕ್ಕಿದ್ದು, ಇದೇ ಜುಲೈ ಮೊದಲ ವಾರ ಸಿನಿಮಾ ಬಿಡುಗಡೆ ಮಾಡುವ ಯೋಜನೆಯಿದೆ ಎಂಬುದು ಚಿತ್ರತಂಡದ ಮಾತು.

“ಶ್ರೀಕಾಳಿಕಾದೇವಿ ಪ್ರೊಡಕ್ಷನ್ಸ್‌’ ಬ್ಯಾನರಿನಲ್ಲಿ ಸಾಂಭಯ್ಯ ಆಚಾರ್ಯ ನಿರ್ಮಿಸಿರುವ “ಆರಂಭ’ ಸಿನಿಮಾವನ್ನು ಉತ್ತರ ಕರ್ನಾಟಕದ ರಾಮದುರ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಸುತ್ತಮುತ್ತ ಚಿತ್ರೀಕರಿಸಲಾಗಿದೆ. “ಆರಂಭ’ ಚಿತ್ರಕ್ಕೆ ಮುಂಜಾನೆ ಮಂಜು ಛಾಯಾಗ್ರಹಣ, ಗುರು ಆಚಾರ್ಯ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಅಲೆಕ್ಸ್‌ ಸಂಗೀತ ಸಂಯೋಜಿಸಿದ್ದಾರೆ.