ಮನೆ ರಾಜ್ಯ ನಕಲಿ ಗಾಂಧಿಗಳು ಕಾನೂನಿಗಿಂತ ದೊಡ್ಡವರೇ?: ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಕಿಡಿ

ನಕಲಿ ಗಾಂಧಿಗಳು ಕಾನೂನಿಗಿಂತ ದೊಡ್ಡವರೇ?: ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಕಿಡಿ

0

ಬೆಂಗಳೂರು(Bengaluru): ‌ಪಕ್ಷದ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ಪ್ರತಿಭಟಿಸುತ್ತಿರುವ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ನಕಲಿ ಗಾಂಧಿಗಳು ಕಾನೂನಿಗಿಂತ ದೊಡ್ಡವರೇ? ಎಂದು ಪ್ರಶ್ನಿಸಿದೆ.

ರಾಜ್ಯದಲ್ಲಿ ಕಾಂಗ್ರೆಸ್‌ ನಾಯಕರ ಪ್ರತಿಭಟನೆಯ ವಿಡಿಯೊವೊಂದನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಕರ್ನಾಟಕ ಬಿಜೆಪಿ, ಮಹಾತ್ಮ ಗಾಂಧೀಜಿ ದೇಶಕ್ಕಾಗಿ ದಂಡಿ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ ಮುಂತಾದ ಚಳುವಳಿಗಳನ್ನು ನಡೆಸಿದ್ದರು. ಆದರೆ, ಕಾಂಗ್ರೆಸ್‌, ನಕಲಿ ಗಾಂಧಿ ಕುಟುಂಬಕ್ಕಾಗಿ ಪ್ರತಿಭಟಿಸುತ್ತಿದೆ ಎಂದು ಟೀಕಿಸಿದೆ. ಹಾಗೆಯೇ, ‘ನಕಲಿ ಗಾಂಧಿಗಳು ಕಾನೂನಿಗಿಂತಲೂ ಮೇಲ್ಪಟ್ಟವರೇ?’ ಎಂದು ಕೇಳಿದೆ.

ನ್ಯಾಷನಲ್ ಹೆರಾಲ್ಡ್ ಹಣ ಅಕ್ರಮ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಸತತ ಮೂರು ದಿನ (ಸೋಮವಾರ, ಮಂಗಳವಾರ ಮತ್ತು ಬುಧವಾರ) ಇ.ಡಿ. ವಿಚಾರಣೆ ಎದುರಿಸಿದ್ದರು. ಗುರುವಾರ ವಿಚಾರಣೆಯಿಂದ ವಿನಾಯಿತಿ ಪಡೆದಿದ್ದರು. ತಾಯಿ ಸೋನಿಯಾ ಗಾಂಧಿ ಅವರ ಅನಾರೋಗ್ಯದ ಕಾರಣ, ಸೋಮವಾರದವರೆಗೆ ವಿಚಾರಣೆಯಿಂದ ವಿನಾಯಿತಿ ನೀಡುವಂತೆ ಅವರು ಮನವಿ ಮಾಡಿದ್ದಾರೆ.

ರಾಹುಲ್‌ ಅವರನ್ನು ವಿಚಾರಣೆಗೆ ಒಳಪಡಿಸಿರುವುದನ್ನು ಖಂಡಿಸಿರುವ ಕಾಂಗ್ರೆಸ್‌, ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಕೇಂದ್ರದ ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದ್ದು, ಈ ವಿಚಾರವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರ ಗಮನಕ್ಕೆ ತರಲು ನಿರ್ಧರಿಸಿದೆ.