ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಪರು ಪರೀಕ್ಷೆ ಮತ್ತು ಆರೋಪಪಟ್ಟಿಯಲ್ಲಿರುವ ವಿಚಾರಗಳನ್ನು ಏಕೆ ಪ್ರಸಾರ ಮಾಡಲು ಬಯಸುತ್ತಿದ್ದೀರಿ ಎಂದು ದೆಹಲಿ ಹೈಕೋರ್ಟ್ ಬುಧವಾರ ಸುದ್ದಿ ವಾಹಿನಿ ಆಜ್ ತಕ್/ಟಿವಿ ಟುಡೇ ನೆಟ್ವರ್ಕ್ ಅನ್ನು ಪ್ರಶ್ನಿಸಿದೆ.
ಶ್ರದ್ಧಾ ಹತ್ಯೆ ಪ್ರಕರಣವನ್ನು ಮಾತ್ರ ಎತ್ತಿ ತೋರಿಸುವ ಸುದ್ದಿವಾಹಿನಿಯ ಧೋರಣೆ ಬಗ್ಗೆ ನ್ಯಾ. ರಜನೀಶ್ ಭಟ್ನಾಗರ್ ಅಸಮಾಧಾನ ವ್ಯಕ್ತಪಡಿಸಿದರು.
“ಇದಕ್ಕಿಂತಲೂ ಅತಿ ಹೇಯವಾದ ಪ್ರಕರಣಗಳಿವೆ… ದೇಶದಲ್ಲಿ ಪ್ರತಿದಿನ 20 ಕೊಲೆಗಳು ನಡೆಯುತ್ತಿವೆ. ನಿರ್ಭಯಾ ಪ್ರಕರಣವನ್ನು ಟಿವಿ ಚಾನೆಲ್ಗಳಲ್ಲಿ ಪ್ರಸಾರ ಮಾಡಲಾಯಿತೆ? ಈ ನಿರ್ದಿಷ್ಟ ಪ್ರಕರಣವನ್ನೇ ಏಕೆ ಆಯ್ಕೆ ಮಾಡಿಕೊಳ್ಳುತ್ತಿದ್ದೀರಿ?” ಎಂದು ಪೀಠ ಪ್ರಶ್ನಿಸಿತು.
ಅಲ್ಲದೆ ಮಾಜಿ ಸಂಸದ, ಪಾತಕಿ ಅತೀಕ್ ಅಹ್ಮದ್ನನ್ನು ಹತ್ಯೆ ಮಾಡಿದ ಪ್ರಕರಣವನ್ನು ಇದೇ ರೀತಿ ಪ್ರಸಾರ ಮಾಡಲಾಯಿತೆ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಈ ಪ್ರಶ್ನೆಗಳಿಗೆ ಆಗಸ್ಟ್ 3 ರಂದು ನಡೆಯಲಿರುವ ವಿಚಾರಣೆ ವೇಳೆ ಪ್ರತಿಕ್ರಿಯೆ ಸಲ್ಲಿಸುವಂತೆಯೂ ನ್ಯಾಯಾಲಯ ಸುದ್ದಿವಾಹಿನಿ ಪರ ವಕೀಲರಿಗೆ ಸೂಚಿಸಿತು.
ಅತೀಕ್ ಅಹ್ಮದ್ ಕೊಲೆಗೆ ಸಂಬಂಧಿಸಿದ ಸುದ್ದಿಯನ್ನೂ ಇದೇ ರೀತಿ ಪ್ರಸಾರ ಮಾಡಿದಿರಾ? ಈ ಪ್ರಶ್ನೆಗೆ ಕೂಡ ಉತ್ತರಿಸಿ. ಆಗಸ್ಟ್ 3ರಂದು ನಿಮ್ಮನ್ನು ಎದುರುಗೊಳ್ಳುತ್ತೇವೆ ಎಂಬುದಾಗಿ ನ್ಯಾಯಾಲಯ ಕಟುಶಬ್ದಗಳಲ್ಲಿ ನುಡಿಯಿತು.
ಶ್ರದ್ಧಾ ಕೊಲೆ ಪ್ರಕರಣದ ಆರೋಪಿ ಅಫ್ತಾಬ್ ಪೂನಾವಾಲಾನ ಮಾನಸಿಕ ವಿಶ್ಲೇಷಣೆ, ಧ್ವನಿ ಸ್ತರ ಪರೀಕ್ಷೆ, ಮಂಪರು ಪರೀಕ್ಷೆಯ ಮಾಹಿತಿಯನ್ನು ಪ್ರದರ್ಶನ ಅಥವಾ ಪ್ರಸಾರ ಮಾಡದಂತೆ ವಾಹಿನಿಗಳಿಗೆ ಏಪ್ರಿಲ್ 19ರಂದು ನೀಡಿದ್ದ ಆದೇಶವನ್ನು ತೆರವುಗೊಳಿಸುವಂತೆ ಕೋರಿ ಟಿವಿ ಟುಡೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.
ವಿಚಾರಣೆ ಬಾಕಿ ಇರುವಾಗ ತನಿಖೆಗೆ ಸಂಬಂಧಿಸಿದ ವೀಡಿಯೊಗಳನ್ನು ಸುದ್ದಿವಾಹಿನಿಗಳು ಪ್ರದರ್ಶಿಸಬಹುದೇ ಎಂದು ಟಿವಿ ಟುಡೇ ಪರವಾಗಿ ಹಾಜರಾದ ವಕೀಲರನ್ನು ನ್ಯಾಯಾಲಯ ಇದೇ ವೇಳೆ ಕೇಳಿತು.
“ನೀವು ಪ್ರಕರಣವೊಂದರ ಆರೋಪಪಟ್ಟಿ ತೆಗೆದುಕೊಂಡು ಅದನ್ನು ಗೋಡೆಗಳ ಮೇಲೆ ಅಂಟಿಸಲು ಸಾಧ್ಯವಿಲ್ಲ. [ಕ್ರಿಮಿನಲ್ ವಿಚಾರಣೆಯಲ್ಲಿ] ಸಾರ್ವಜನಿಕ ದಾಖಲೆಗಳನ್ನು ಟಿವಿಯಲ್ಲಿ ಎಷ್ಟು ಪ್ರಮಾಣದಲ್ಲಿ ಪ್ರದರ್ಶಿಸಬಹುದು ಎಂಬ ಸೀಮಾರೇಖೆ ಎಳೆಯಬೇಕಿದೆ ” ಎಂದು ನ್ಯಾಯಾಲಯ ಹೇಳಿತು.