ಮನೆ ರಾಜ್ಯ ಅರ್ಜುನ ಪ್ರಶಸ್ತಿ ವಿಜೇತ ಅಂಗವಿಕಲ ಅಥ್ಲೀಟ್‌ ಗೆ ಉದ್ಯೋಗ ಬಡ್ತಿ ನೀಡಿ: ಹೈಕೋರ್ಟ್‌

ಅರ್ಜುನ ಪ್ರಶಸ್ತಿ ವಿಜೇತ ಅಂಗವಿಕಲ ಅಥ್ಲೀಟ್‌ ಗೆ ಉದ್ಯೋಗ ಬಡ್ತಿ ನೀಡಿ: ಹೈಕೋರ್ಟ್‌

0

ಬೆಂಗಳೂರು (Bengaluru)-ಅರ್ಜುನ ಪ್ರಶಸ್ತಿ ಪುರಸ್ಕೃತ ಅಂಗವಿಕಲ ಅಥ್ಲೀಟ್ ಆಗಿರುವ ಉದ್ಯೋಗಿಯೊಬ್ಬರಿಗೆ ಬಡ್ತಿ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.

ಪ್ಯಾರಾ ಅಥ್ಲೀಟ್ ವೆಂಕಟರವಣಪ್ಪ ಅವರಿಗೆ ಉದ್ಯೋಗದಲ್ಲಿ ಬಡ್ತಿ ಸೇರಿದಂತೆ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ಗೆ (ಬಿಇಎಲ್) ಹೈಕೋರ್ಟ್ ನಿರ್ದೇಶಿಸಿದೆ.

ವೆಂಕಟರವಣಪ್ಪ ಅವರಿಗೆ ಹಣಕಾಸು ಸೌಲಭ್ಯ ಕಲ್ಪಿಸುವಂತೆ ಕೈಗಾರಿಕಾ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ರದ್ದುಪಡಿಸಬೇಕು ಎಂದು ಬಿಇಎಲ್ ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌.ಸುಜಾತ ಮತ್ತು ಶಿವಶಂಕರ ಅಮರಣ್ಣವರ ಅವರಿದ್ದ ವಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ ಈ ಆದೇಶ ನೀಡಿದೆ.

ವೆಂಕಟರವಣಪ್ಪ ಸೀಮಿತ ಆದಾಯದ ಮೂಲ ಹೊಂದಿರುವ ಅಂಗವಿಕಲರಾಗಿದ್ದು, 2022ರ ಜೂನ್‌ನಲ್ಲಿ ನಿವೃತ್ತರಾಗಲಿದ್ದಾರೆ. ಅವರಿಗೆ ಭವಿಷ್ಯದಲ್ಲಿ ಮತ್ತಷ್ಟು ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ ಇದೆ. ಆದ್ದರಿಂದ ಅವರಿಗೆ ಬಡ್ತಿ,ಹಣಕಾಸು ಸೌಲಭ್ಯ ಸೇರಿದಂತೆ ಉಳಿದ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನ್ಯಾಯಪೀಠ ಹೇಳಿದೆ.

ವೆಂಕಟರವಣಪ್ಪ ದೈಹಿಕ ಅಂಗವಿಕಲರ ಕೋಟಾದಡಿಯಲ್ಲಿ ಬಿಇಎಲ್‌ನಲ್ಲಿ ಡ್ರಾಫ್ಟ್ಸ್‌ಮನ್ ಡಬ್ಲ್ಯೂಜಿ-3 ಶ್ರೇಣಿಯ ಉದ್ಯೋಗಕ್ಕೆ 1998ರ ಜನವರಿ 1ರಂದು ಸೇರಿದ್ದರು. ಬ್ರಿಸ್ಬೇನ್, ಬ್ಯಾಂಕಾಕ್, ಫ್ರಾನ್ಸ್, ಬುಸಾನ್, ಗ್ರೀಸ್ ಮತ್ತು ಕ್ವಾಲಾಲಂಪುರ ಸೇರಿದಂತೆ ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ಯಾರಾ-ಅಥ್ಲೆಟಿಕ್ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಅರ್ಜುನ, ಏಕಲವ್ಯ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಗಳಿಸಿದ್ದಾರೆ.