ನೈರೋಬಿ: ಕೀನ್ಯಾದಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಸೇನಾ ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ (61) ಸೇರಿದಂತೆ 9 ಮಿಲಿಟರಿ ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಹೆಲಿಕಾಪ್ಟರ್ ಟೇಕಾಫ್ ಆದ ಕೆಲವೇ ಸಮಯದಲ್ಲಿ ಪತನಗೊಂಡಿದ್ದು, ರಾಜಧಾನಿ ನೈರೋಬಿಯಿಂದ 400 ಕಿಲೋಮೀಟರ್ ದೂರದ ಪ್ರದೇಶದಲ್ಲಿ ಗುರುವಾರ ಈ ಘಟನೆ ನಡೆದಿದೆ.
ಕೀನ್ಯಾದ ಸ್ಥಳೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 2.20ಕ್ಕೆ ಅಪಘಾತ ಸಂಭವಿಸಿದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ತಂಡವನ್ನು ಕಳುಹಿಸಲಾಗಿದೆ ಎಂದು ಅಧ್ಯಕ್ಷ ವಿಲಿಯಂ ರುಟೊ ಹೇಳಿದ್ದಾರೆ.
ಈ ಘಟನೆಯಲ್ಲಿ ಇಬ್ಬರು ಬದುಕುಳಿದಿದ್ದು, ಉಳಿದ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮೃತ ಸೇನಾ ಮುಖ್ಯಸ್ಥ ಜನರಲ್ ಫ್ರಾನ್ಸಿಸ್ ಒಮೊಂಡಿ ಒಗೊಲ್ಲಾ ಈ ಹಿಂದೆ ಕೀನ್ಯಾ ವಾಯುಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಉಪ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಅವರು ಮಿಲಿಟರಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಕಳೆದ ವರ್ಷ ಅವರನ್ನು ರಕ್ಷಣಾ ಮುಖ್ಯಸ್ಥ ಜನರಲ್ ಆಗಿ ಬಡ್ತಿ ನೀಡಲಾಗಿತ್ತು. ರಕ್ಷಣಾ ಸಚಿವಾಲಯದ ಪ್ರೊಫೈಲ್ ಪ್ರಕಾರ ಒಗೊಲ್ಲಾ 1984 ರಲ್ಲಿ ಕೀನ್ಯಾ ರಕ್ಷಣಾ ಪಡೆಗಳಿಗೆ ಸೇರಿದ್ದರು. ಇದಲ್ಲದೇ ಅವರು ಯುನೈಟೆಡ್ ಸ್ಟೇಟ್ಸ್ ಏರ್ ಫೋರ್ಸ್ನಲ್ಲಿ ಫೈಟರ್ ಪೈಲಟ್ ಆಗಿ ಮತ್ತು ಕೀನ್ಯಾ ಏರ್ ಫೋರ್ಸ್ (ಕೆಎಎಫ್) ನಲ್ಲಿ ಬೋಧಕ ಪೈಲಟ್ ಆಗಿ ತರಬೇತಿ ಪಡೆದು,40 ವರ್ಷಗಳಿಂದ ಮಿಲಿಟರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.