ದಾವಣಗೆರೆ: ದಾವಣಗೆರೆಯಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಪೂಜೆ ಮಾಡಿ ಕಷ್ಟವನ್ನು ಪರಿಹರಿಸುತ್ತೇವೆಂದು ದಂಪತಿಗೆ ವಂಚಿಸಲಾಗಿದೆ.
ವಂಚಕರನ್ನು ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಒರಿಸ್ಸಾ ಮೂಲದ ಇಸ್ಮಾಯಿಲ್ ಜಬೀವುಲ್ಲಾ (30) ಮತ್ತು ರುಕ್ಸಾನಾಬೇಗಂ (28) ಬಂಧಿತರು.
ಆರೋಪಿಗಳಿಂದ 8.65 ಲಕ್ಷ ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣಗಳು ಹಾಗೂ 750 ಗ್ರಾಂ ತೂಕದ ಬೆಳ್ಳಿಯ ಸಾಮಾನುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ದಾವಣಗೆರೆ ನಗರ ಸೇರಿ ವಿವಿಧೆಡೆ ಆರೋಪಿಗಳು ವಂಚಿಸಿದ್ದರು.
ನಡೆದಿದ್ದು ಏನು?
ಹರಿಹರ ತಾಲೂಕಿನ ಬನ್ನಿಕೋಡ ಗ್ರಾಮದ ಶಶಿಕಲಾ ಮತ್ತು ರಮೇಶ್ ದಂಪತಿ ಆರ್ಥಿಕ ಸಂಕಷ್ಟ ಉಂಟಾಗಿತ್ತು. ಇದನ್ನು ಅರಿತ ಆರೋಪಿಗಳಾದ ಇಸ್ಮಾಯಿಲ್ ಜಬೀವುಲ್ಲಾ ಮತ್ತು ರುಕ್ಸಾನ ಬೇಗಂ ಫೆಬ್ರವರಿ 11 ರಂದು ದಂಪತಿ ಮನೆಗೆ ಹೋಗಿದ್ದಾರೆ. ಬಳಿಕ, “ವಿಶೇಷ ಪೂಜೆ ಮಾಡಿಸಿ ಸಂಕಷ್ಟ ಪರಿಹಾರವಾಗುತ್ತದೆ” ದಂಪತಿಗೆ ನಂಬಿಸಿದ್ದಾರೆ. ನಂತರ, ದಂಪತಿ ಮನೆಯಲ್ಲಿದ್ದ ಒಟ್ಟು 1.44 ಲಕ್ಷ ರೂ. ಬೆಲೆಯ 2 ತೊಲ 02 ಗ್ರಾಂ ಬಂಗಾರದ ಆಭರಣಗಳನ್ನು ಪಡೆದು, ಪೂಜೆ ಮಾಡಿಕೊಡುತ್ತೇವೆ ಅಂತಾ ಹೇಳಿ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ.
ಬಳಿಕ, ದಂಪತಿ ಹರಿಹರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು 305 ರೆ/ವಿ 3(5) ಬಿ.ಎನ್.ಎಸ್-2023 ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.