ಬೆಂಗಳೂರು: ಸರ್ಕಾರಿ ಸೌಮ್ಯದ ಸಂಸ್ಥೆಯಲ್ಲಿ ಉದ್ಯೋಗ ಕೊಡಿಸುವುದಾಗಿ ಯುವಕರನ್ನು ನಂಬಿಸಿ ಹಣ ಪಡೆದು ವಂಚಿಸುತ್ತಿದ್ದ ದಂಪತಿಯನ್ನು ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ದೊಡ್ಡಬೊಮ್ಮಸಂದ್ರದ ಪ್ರಕಾಶ್ ಹಾಗೂ ಮಧು ಬಂಧಿತ ದಂಪತಿ.
ಬಂಧಿತರಿಂದ 2 ಲಕ್ಷ ರೂ. ನಗದು, ವಿವಿಧ ಕಂಪನಿಯ 4 ಮೊಬೈಲ್, ಬೈಕ್, 6 ಬ್ಯಾಂಕ್ ಖಾತೆಗಳಿಗೆ ಸೇರಿದ 15 ಕ್ರೆಡಿಟ್, ಡೆಬಿಟ್ ಹಾಗೂ ಚೆಕ್ ಬುಕ್‌ಗಳು, 11 ವಿವಿಧ ಕಂಪನಿಯ ಕೈಗಡಿಯಾರ, ಸಿಮ್ ಕಾರ್ಡ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಪ್ರತಿಷ್ಠಿತ ಸಂಸ್ಥೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಯುವಕರಿಂದ 6 ಲಕ್ಷ ರೂ. ಪಡೆದುಕೊಂಡಿದ್ದರು. ಕೆಲಸವನ್ನೂ ಕೊಡಿಸಿದೆ, ಹಣ ವಾಪಸ್ ನೀಡದೆ ವಂಚಿಸಿದ್ದರು. ಈ ಸಂಬಂಧ ದೂರು ದಾಖಲಾಗಿತ್ತು. ಅದನ್ನು ಆಧರಿಸಿ ವಿಶೇಷ ತಂಡ ರಚಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ಮೂರು ಪ್ರಕರಣಗಳು ಪತ್ತೆಯಾಗಿವೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.