ಮನೆ ಅಪರಾಧ 5 ಸಾವಿರಕ್ಕೂ ಹೆಚ್ಚು ಕಾರು ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ

5 ಸಾವಿರಕ್ಕೂ ಹೆಚ್ಚು ಕಾರು ಕಳ್ಳತನ ಮಾಡಿದ್ದ ವ್ಯಕ್ತಿಯ ಬಂಧನ

0

ನವದೆಹಲಿ(Newdelhi):ವಿವಿಧ ರಾಜ್ಯಗಳಲ್ಲಿ 5 ಸಾವಿರಕ್ಕೂ ಹೆಚ್ಚು ಕಾರು ಕಳ್ಳತನ ಮಾಡಿದ್ದ,  ‘ಭಾರತದ ಅತಿಡೊಡ್ಡ ಕಾರು ಕಳ್ಳ’ ಎಂಬ ಕುಖ್ಯಾತಿ ಹೊಂದಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅನಿಲ್ ಚೌಹಾಣ್ ಎಂಬ 52 ವರ್ಷ ವಯಸ್ಸಿನ ವ್ಯಕ್ತಿ ಸುಮಾರು 27 ವರ್ಷಗಳಿಂದ ಕಾರಕಳ್ಳತನ ಮಾಡುತ್ತಿದ್ದ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.

ಕಾರು ಕಳ್ಳತನ ಪ್ರಕರಣದಲ್ಲಿ ದೆಹಲಿ ಕೇಂದ್ರ ವಲಯದ ವಿಶೇಷ ಪೊಲೀಸ್ ಘಟಕ ಅನಿಲ್ ಚೌಹಾಣ್‌ನನ್ನು ದೇಶ ಬಂಧು ಗುಪ್ತಾ ಮಾರ್ಗದಲ್ಲಿ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಅನಿಲ್ ಚೌಹಾಣ್ ವಿರುದ್ಧ ದೇಶದ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ, ಬೆದರಿಕೆ, 3 ಕೊಲೆ, ಸುಲಿಗೆ ಸೇರಿದಂತೆ 180 ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ.

3 ಹೆಂಡತಿಯರನ್ನು ಹಾಗೂ 7 ಮಕ್ಕಳನ್ನು ಹೊಂದಿರುವ ಬಂಧಿತ ಅನಿಲ್, ಮುಂಬೈ, ದೆಹಲಿ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನೂರಾರು ಕೋಟಿ ರೂಪಾಯಿ ಆಸ್ತಿ, ವಿಲ್ಲಾ, ಬಂಗ್ಲೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.

1995ರಲ್ಲಿ ದೆಹಲಿಯಲ್ಲಿ ಆಟೋ ಓಡಿಸಿಕೊಂಡಿದ್ದ ಅನಿಲ್, ಅಂದಿನಿಂದ ಇಂದಿನವರೆಗೂ ಮಾರುತಿ ಸುಜುಕಿ ಕಾರುಗಳಿಂದ ಹಿಡಿದು ಐಷಾರಾಮಿ ಕಾರುಗಳನ್ನು ಕಳ್ಳತನ ಮಾಡುವುದರಲ್ಲಿ ನಿಷ್ಣಾತನಾಗಿದ್ದ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಕದ್ದ ಕಾರುಗಳನ್ನು ಅನಿಲ್, ನೇಪಾಳ, ಜಮ್ಮು ಮತ್ತು ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಿಗೆ ಮಾರುತ್ತಿದ್ದ. ಅಲ್ಲದೇ ಇತ್ತೀಚೆಗೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಹಾಗೂ ಮಾರಾಟದ ದಂಧೆ ಶುರು ಮಾಡಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

2015 ರಲ್ಲಿ ಅನಿಲ್‌ನನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿತ್ತು. ಬಿಡುಗಡೆ ನಂತರವೂ ಕಾರು ಕಳ್ಳತನ, ಅಕ್ರಮ ವ್ಯವಹಾರಗಳನ್ನು ಮುಂದುವರೆಸಿದ್ದ. ಈತನ ವಿರುದ್ಧ ಜಾರಿ ನಿರ್ದೇಶನಾಲಯವೂ (ಇ.ಡಿ) ಪ್ರಕರಣ ದಾಖಲಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.