ಮೈಸೂರು: ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಮನೆಗಳ್ಳರನ್ನ ಬಂಧಿಸಿರುವ ಸಿಸಿಬಿ ಪೊಲೀಸರು, ಬಂಧಿತರಿಂದ 35 ಲಕ್ಷ ರೂ. ಮೌಲ್ಯದ 602 ಗ್ರಾಂ ತೂಕದ ಚಿನ್ನ ಮತ್ತು 29 ಗ್ರಾಂ ಬೆಳ್ಳಿ ಪದಾರ್ಥವನ್ನು ವಶಪಡಿಸಿಕೊಂಡಿದ್ದಾರೆ.
ಅ. 19ರಂದು ರಾಜೀವ್ ನಗರದ ದೇವಸ್ಥಾನದ ಬಳಿ ಕನ್ನ ಕಳವು ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತನನ್ನ ವಿಚಾರಣೆಗೊಳಪಡಿಸಿದ್ದಾರೆ.
ಈ ವೇಳೆ ಆತ ನಗರದ ವಿದ್ಯಾರಣ್ಯಪುರಂ ಠಾಣೆ, ದಾವಣಗೆರೆಯ ಹರಿಹರ ಠಾಣೆಯ ವ್ಯಾಪ್ತಿಯ ಮನೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಆತನಿಂದ 12 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ 29 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಅ. 21 ರಂದು ನಗರದ ಹನುಮಂತ ವೃತ್ತದ ಬಳಿ ಕಳವು ಪ್ರಕರಣದ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆತ ನಜರ್ ಬಾದ್, ಆಲನಹಳ್ಳಿ, ಕುವೆಂಪುನಗರದ ವಿವಿಧೆಡೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ.
ಆತನಿಂದ 23 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನಾಭರಣ ಮತ್ತು 29 ಗ್ರಾಂ ತೂಕದ ಬೆಳ್ಳಿ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರದ ಪೊಲೀಸ್ ಆಯುಕ್ತ ಬಿ. ರಮೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.