ಮನೆ ಅಪರಾಧ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಬಂಧನ

ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ಬಂಧನ

0

ಮಂಡ್ಯ: ಮದ್ದೂರು ತಾಲೂಕಿನ ಕೆಎಂ ದೊಡ್ಡಿಯಲ್ಲಿ ಪಿಎಸ್‌’ಐ ಸಮವಸ್ತ್ರ ಧರಿಸಿ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್ ನನ್ನು ಕೆ.ಎಂ‌.ದೊಡ್ಡಿಯ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಗೊಟ್ಟಿಗೆರೆ ನಿವಾಸಿ ಸಂಜಯ್ ಬಂಧಿತ ಆರೋಪಿ.

ಸಂಜಯ್ ಪಿಎಸ್‌’ಐ ಸಮವಸ್ತ್ರ ಧರಿಸಿ ಕೆಎಂ ದೊಡ್ಡಿ ಸುತ್ತಮುತ್ತ ದ್ವಿಚಕ್ರ ವಾಹನಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದ. ಬಳಿಕ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ ಎಂದು ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿದ್ದ.

ನಕಲಿ ಪೊಲೀಸ್ ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿರುವುದರ ಬಗ್ಗೆ ಸ್ಥಳೀಯರು ಕೆಎಂ ದೊಡ್ಡಿ ಠಾಣೆಯ ಇನ್ಸ್’​ಪೆಕ್ಟರ್ ಆನಂದ್‌ಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಎಚ್ಚೆತ್ತ ಕೆಎಂ ದೊಡ್ಡಿ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಸಂಜಯ್ ಪಿಎಸ್’ಐ ಸಮವಸ್ತ್ರದಲ್ಲಿ ಇರುವಾಗಲೇ ಹಿಡಿದು ವಿಚಾರಣೆ ಮಾಡಿದಾಗ ತಾನೊಬ್ಬ ನಕಲಿ ಪೊಲೀಸ್ ಎಂದು ತಪೊಪ್ಪಿಕೊಂಡಿದ್ದಾನೆ. ಆರೋಪಿ ಸಂಜಯ್‌’ಗೆ ಎಚ್ಚರಿಕೆ ನೀಡಿ ಕೋರ್ಟ್ ಜಾಮೀನಿನ ಮೇಲೆ ಆತನನ್ನು ಬಿಡುಗಡೆ ಮಾಡಲಾಗಿದೆ.