ಮನೆ ಅಪರಾಧ ಐವರು ಪಿಕ್‌ಪಾಕೆಟ್‌ ಸಹೋದರರ ಬಂಧನ

ಐವರು ಪಿಕ್‌ಪಾಕೆಟ್‌ ಸಹೋದರರ ಬಂಧನ

0

ಬೆಂಗಳೂರು: ಬಿಎಂಟಿಸಿ ಬಸ್‌ ನಿಲ್ದಾಣ, ಬಸ್‌ ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಪ್ರಯಾಣಿಸಿ ಗಮನ ಬೇರೆಡೆ ಸೆಳೆದು ನಗದು, ಚಿನ್ನಾಭರಣ ಕಳವು ಮಾಡುತ್ತಿದ್ದ ಒಂದೇ ಕುಟುಂಬದ ಐವರು ಸೇರಿ ಆರು ಜೇಬುಗಳ್ಳರನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

Join Our Whatsapp Group

ಬಸವನಗುಡಿ ನಿವಾಸಿಗಳಾದ ಕದ್ರಿವೇಲು, ರಘು, ಕನ್ಯಾಕುಮಾರ್‌, ಮಹೇಶ್‌, ಸುಂದರ್‌ ರಾಜ್‌ ಹಾಗೂ ಸೈಯದ್‌ ಸಲೀಂ ಬಂಧಿತರು. ಆರೋಪಿಗಳ ಪೈಕಿ ಸೈಯದ್‌ ಸಲೀಂ ಹೊರತು ಪಡಿಸಿ ಇತರೆ ಆರೋಪಿಗಳು ಒಂದೇ ಕುಟುಂಬದವರಾಗಿದ್ದಾರೆ. ಒಂದೇ ಮನೆಯಲ್ಲಿ ವಾಸವಾಗಿದ್ದಾರೆ. ಬಂಧಿತರಿಂದ 1.50 ಲಕ್ಷ ರೂ. ನಗದು, 29 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.

ಇತ್ತೀಚೆಗೆ ಸಿಟಿ ಮಾರುಕಟ್ಟೆಯಿಂದ ನಿಮ್ಹಾನ್ಸ್‌ ಕಡೆ ಬಿಎಂಟಿಸಿ ಬಸ್‌ನಲ್ಲಿ ವ್ಯಕ್ತಿಯೊಬ್ಬರು ಪತ್ನಿ ಜತೆ ಹೋಗುತ್ತಿದ್ದರು. ಆಗ ಆರೋಪಿಗಳು ಗಮನ ಬೇರೆಡೆ ಸೆಳೆದು ಪತ್ನಿ ಚಿಕಿತ್ಸೆಗೆಂದು ಕೊಂಡೊಯ್ಯುತ್ತಿದ್ದ 1 ಲಕ್ಷ ರೂ. ಕಳವು ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.

ಎಂಟು ಮಂದಿಯ ಈ ತಂಡದಲ್ಲಿ ಐವರು ಅಣ್ಣ-ತಮ್ಮಂದಿರಿದ್ದು, ನಿತ್ಯ ಕೆಲಸಕ್ಕೆ ಹೋಗುವ ರೀತಿ ಮನೆಯಿಂದ ಹೊರಟು ಕಳ್ಳತನ ಮಾಡಿಕೊಂಡು ರಾತ್ರಿಯಾಗುತ್ತಿದ್ದಂತೆ ಮನೆ ಸೇರಿಕೊಳ್ಳುತ್ತಿದ್ದರು. ಬಳಿಕ ಎಲ್ಲರೂ ಹಂಚಿಕೊಳ್ಳುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ. ಪ್ರಮುಖವಾಗಿ ಬಿಎಂಟಿಸಿ ಬಸ್‌ಗಳನ್ನೇ ಟಾರ್ಗೆಟ್‌ ಮಾಡಿಕೊಂಡು, ಹೆಚ್ಚು ಜನರಿರುವ ಬಸ್‌ಗಳಲ್ಲಿ ಜೇಬು ಕಳವು ಮಾಡುತ್ತಿದ್ದರು. ಐದಾರು ವರ್ಷಗಳಿಂದ ಇದೇ ಕೃತ್ಯದಲ್ಲಿ ತೊಡಗಿದ್ದು, ಆರೋಪಿಗಳ ಬಂಧನದಿಂದ ಹಲಸೂರು ಗೇಟ್‌, ಉಪ್ಪಾರಪೇಟೆ, ಸದಾಶಿವನಗರ ಠಾಣೆ ವ್ಯಾಪ್ತಿಯಲ್ಲಿ ಕೃತ್ಯವೆಸಗಿದ್ದರು ಎಂದು ಪೊಲೀಸರು ಹೇಳಿದರು.

ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.