ಮನೆ ಅಪರಾಧ ಮನೆಗಳ್ಳತನ, ಕಾರುಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ವೃತ್ತಿ ನಿರತ ಕಳ್ಳನ ಬಂಧನ

ಮನೆಗಳ್ಳತನ, ಕಾರುಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ವೃತ್ತಿ ನಿರತ ಕಳ್ಳನ ಬಂಧನ

0

ಮೈಸೂರು: ಮನೆಗಳ್ಳತನ ಮತ್ತು ಕಾರುಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ವೃತ್ತಿ ನಿರತ ಕಳ್ಳನನ್ನು ಬಂಧಿಸಿರುವ ಮೈಸೂರಿನ ವಿವಿ ಪುರಂ ಠಾಣೆ ಪೊಲೀಸರು, ಬಂಧಿತನಿಂದ ೧.೧೯ ಕೋಟಿ ಮೌಲ್ಯದ ೩ ಕಾರುಗಳು, ೩ ವಾಚ್‌ಗಳು ಮತ್ತು ೭೫೦ ಗ್ರಾಂ. ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

Join Our Whatsapp Group

ಯಾದವಗಿರಿಯ ೫ನೇ ಮುಖ್ಯರಸ್ತೆಯ ಮನೆ ಮುಂದೆ ನಿಲ್ಲಿಸಿದ್ದ ಕಾರನ್ನು ಜು.೨೫ರಂದು ಕಳ್ಳತನ ಮಾಡಿಕೊಂಡು ಹೋಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆಂಧಪ್ರದೇಶ ಮೂಲದ ಸತ್ತಿ ರೆಡ್ಡಿ ಅಲಿಯಾಸ್ ಸತ್ತಿ ಬಾಬು (೩೫) ಎಂಬಾತನನ್ನು ಬಂಧಿಸಿದ್ದಾರೆ.

ಆರೋಪಿ ಐಷಾರಾಮಿ ಜೀವನಕ್ಕೆ ಮಾರು ಹೋಗಿದ್ದಲ್ಲದೇ ಶ್ರೀಮಂತರು ಇರುವ ಬಡಾವಣೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ಕಾರು ಕಳವು ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ತಿಳಿದುಬಂದಿದೆ.

ಆರೋಪಿಯಿಂದ ವಿ.ವಿ.ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ೦೧ ಕಾರು, ೨ ಮನೆಗಳವು ಹಾಗೂ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ೨ ಕಾರು ಕಳವು ಪ್ರಕರಣ ಪತ್ತೆಯಾಗಿದೆ. ಈ ಆರೋಪಿಯಿಂದ ಒಟ್ಟು ೧.೧೯ ಕೋಟಿ ಮೌಲ್ಯದ ೩ ಕಾರು, ಬ್ರೀಗ್ವಿಟ್, ಓಮೇಗಾ, ಪನೇರಾಯ್ ಕಂಪನಿಯ ೩ ವಾಚ್, ೧ ಹೆಡ್ ಫೋನ್ ಮತ್ತು ಬಿ ಮತ್ತು ಒ ಫೋನ್ ಸ್ವೀಕರ್ ಹಾಗೂ ೭೫೦ ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಗೂಗಲ್ ಮೂಲಕ ಸ್ಕೇಚ್: ಆಂಧ ಮೂಲದ ಖದೀಮ ಗೂಗಲ್ ಮೂಲಕ ಶ್ರೀಮಂತರು ವಾಸವಿರುವ ಬಡಾವಣೆಗಳನ್ನು ಪತ್ತೆ ಹಚ್ಚುತ್ತಿದ್ದ. ಅಲ್ಲಿಗೆ ಬಂದು ಮನೆ ಮತ್ತು ಕಾರು ಕಳ್ಳತನ ನಡೆಸುತ್ತಿದ್ದ. ೩೫ ವರ್ಷದ ಖದೀಮ ಎಸ್ಸೆಸ್ಸೆಲ್ಸಿವರೆಗೆ ವ್ಯಾಸಂಗ ಮಾಡಿದ್ದು, ಆತನ ವಿರುದ್ಧ ೫೯ ಪ್ರಕರಣಗಳು ದಾಖಲಾಗಿದೆ. ಆಂಧದಲ್ಲಿ ೩೬, ತೆಲಂಗಾಣದಲ್ಲಿ ೨೦ ಮತ್ತು ತಮಿಳುನಾಡಿನಲ್ಲಿ ೩ ಪ್ರಕರಣ ದಾಖಲಾಗಿದ್ದು, ಚಿತ್ತೂರಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಜೈಲುಪಾಲಾಗಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಮೈಸೂರಿನಲ್ಲಿ ಕಳ್ಳತನ ನಡೆಸುವಾಗ ಮತ್ತೆ ಸಿಕ್ಕಿ ಬಿದ್ದಿದ್ದಾನೆ ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.

ಈ ಪತ್ತೆ ಕಾರ್ಯದಲ್ಲಿ ನಗರ ಕೇಂದ್ರ ಸ್ಥಾನದ ಅಪರಾಧ ವಿಭಾಗದ ಡಿಸಿಪಿ ಎಸ್.ಜಾಹ್ನವಿ ಮಾರ್ಗದರ್ಶನದಲ್ಲಿ ಎನ್.ಆರ್.ಉಪ ವಿಭಾಗದ ಎಸಿಪಿ ಸಿ.ಕೆ.ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ವಿ.ವಿ ಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಎಂ.ಮೋಹನ್‌ಕುಮಾರ್, ಎಸ್‌ಐ ಕೆ.ಲೇಪಾ, ಕೆ.ಕೆ.ಮೋಹನ್, ಸಿಬ್ಬಂದಿ ಎಸ್. ಪ್ರಸನ್ನ, ಜಿ. ಸುರೇಶ್, ರವಿಗೌಡ, ಎಸ್. ಚೆಲುವರಾಜು, ಸುನಿಲ್ ಕಾಂಬಳೆ, ವೀರಣ್ಣ, ಬಿ. ಉಮೇಶ್, ಹರೀಶ್ ಮತ್ತು ಚಾಮುಂಡಮ್ಮ ಇದ್ದರು.

ಮನೆಗಳ್ಳನ ಬಂಧನ: ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಬೆಳವಾಡಿ ಗೇಟ್‌ನಲ್ಲಿನ ಸರ್ವಿಸ್ ಸೆಂಟರ್ ಬಾಗಿಲು ಒಡೆದು ಕಳ್ಳತನ ಮಾಡಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ವಿಜಯನಗರ ಪೊಲೀಸರು ೧೦ ಲಕ್ಷ ರೂ. ಮೌಲ್ಯದ ಗೂಡ್ಸ್ ವಾಹನ, ಹ್ಯಾಮರಿಂಗ್ ಮಿಷನ್, ವೆಲ್ಡಿಂಗ್ ಮಿಷನ್ ಮತ್ತು ಲ್ಯಾಪ್‌ಟಾಪ್ ವಶಪಡಿಸಿಕೊಂಡಿದ್ದಾರೆ.

ಸರಗಳ್ಳನ ಬಂಧನ: ನರಸಿಂಹರಾಜ ಪೊಲೀಸ್ ಠಾಣೆ ವ್ಯಾಪ್ತಿಯ ಹಳೆಕೆಸರೆಯ ಗಂಗಾನಗರದಲ್ಲಿ ಮಾರ್ಚ್ ೨೯ರಂದು ಮಹಿಳೆಯ ಸರ ಕಿತ್ತುಕೊಂಡು ಹೋಗಿದ್ದ ಆರೋಪಿಯನ್ನು ಬಂಧಿಸಿರುವ ಎನ್.ಆರ್. ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ೫೦ ಸಾವಿರ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.

ಪ್ರತ್ಯೇಕ ೩ ಪ್ರಕರಣ: ೭ ಮಂದಿ ಬಂಧನ: ನಗರದಲ್ಲಿ ನಡೆದಿದ್ದ ಮನೆಗಳ್ಳತನ, ದರೋಡೆ ಹಾಗೂ ಸರಗಳ್ಳತನ ಪ್ರಕರಣದಲ್ಲಿ ೭ ಮಂದಿಯನ್ನು ಬಂಧಿಸಿರುವ ಪೊಲೀಸರು ೪.೩೫ ಲಕ್ಷ ರೂ. ನಗದು, ೧೦.೫೦ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜು.೨೬ರಂದು ಸಿಪೆಟ್ ಕಾಲೇಜಿನ ಖಾಸಗಿ ಕಂಪನಿಯ ವ್ಯಕ್ತಿಯೊಬ್ಬರು ಹಣ ಸಂದಾಯ ಮಾಡಲು ತೆರಳುವಾಗ ಕಣ್ಣಿಗೆ ಕಾರದಪುಡಿ ಎರಚಿ ೬,೦೫,೭೯೭ ರೂ. ದರೋಡೆ ಮಾಡಿದ್ದ ಪ್ರಕರಣ ಭೆದಿಸಿದ ಹೆಬ್ಬಾಳ ಪೊಲೀಸರು ೫ ಮಂದಿ ಆರೋಪಿಗಳನ್ನು ಬಂಧಿಸಿ, ಆತನಿಂದ ೪.೩೫ ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ ಸೈಕಲ್ ಮತ್ತು ಸ್ಕೂಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.