ಬೆಂಗಳೂರು: ಕ್ರೈಂಗಳು ಹೆಚ್ಚುತ್ತಿರುವ ಬೆನ್ನಲ್ಲೆ ಕಾರ್ಯಾಚರಣೆಗಿಳಿದಿದ್ದ ಬೆಂಗಳೂರು ನಗರ ಪೊಲೀಸರು ಖರ್ತನಾಕ್ ಕಳ್ಳರ ಹೆಡೆಮುರಿ ಕಟ್ಟಿ ಜೈಲಿಗೆ ಕಳಿಸಿದ್ದಾರೆ.
ಕುಮಾರಸ್ವಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಿಜಿ ಕಳ್ಳರನ್ನು ಬಂಧಿಸಿದ್ದಾರೆ. ಬೆಳಗ್ಗೆ ಎದ್ದು ನಾವೆಲ್ಲಾ ಕೆಲಸಕ್ಕೆ ಹೋದಂತೆ ಇವರು ಪಿಜಿಗಳಲ್ಲಿ ಕಳ್ಳತನ ಮಾಡಲು ಹೊರಡುತ್ತಿದ್ದರು. ಪಿಜಿಗಳಲ್ಲಿ ಕದಿಯಲು ಸಾಧ್ಯವಾಗದೆ ಇದ್ದರೆ ಬ್ಯಾಚುಲರ್ ರೂಂಗಳನ್ನು ಹುಡುಕುತ್ತಿದ್ದರು. ಬ್ಯಾಚುಲರ್ಸ್ ಪಾಟ್ ಅಥವಾ ಮ್ಯಾಟ್ ಕೆಳಗೆ ಇಡುತ್ತಿದ್ದ ಕೀಗಳನ್ನು ಗಮನಿಸಿ ಆ ರೂಂಗೆ ಕನ್ನ ಹಾಕುತ್ತಿದ್ದರು. ಹೀಗೆ ಲ್ಯಾಪ್ ಟ್ಯಾಪ್, ಮೊಬೈಲ್ ಗಳನ್ನೇ ಟಾರ್ಗೆಟ್ ಮಾಡುತ್ತಿದ್ದ ಮೂವರು ಕಳ್ಳರನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿ ಒಟ್ಟು 23 ಲಕ್ಷ ಮೌಲ್ಯದ 28 ಮೊಬೈಲ್ ಗಳು, 34 ಲ್ಯಾಪ್ ಟ್ಯಾಪ್‌ಗಳನ್ನು ವಶಕ್ಕೆ ಪಡೆಯಲಾಗಿದೆ.














