ಮಂಗಳೂರು(ದಕ್ಷಿಣ ಕನ್ನಡ): ಮಂಗಳೂರು ಸಿಸಿಬಿ ಪೊಲೀಸರ ಮೇಲೆಯೇ ಕಾರು ಹಾಯಿಸಿ ಕೊಲೆಗೆ ಯತ್ನಿಸಿದ್ದ ರೌಡಿಶೀಟರ್ ರೋಹಿದಾಸ್ ಕೆ. ಯಾನೆ ಆಕಾಶಭವನ ಶರಣ್ ನನ್ನು ಶೂಟೌಟ್ ಮಾಡಿ ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಮಂಗಳೂರಿನ ಜಪ್ಪು ಕುಡ್ಪಾಡಿಯಲ್ಲಿ ಆಕಾಶಭವನ ಶರಣ್‌ನ ಇರುವಿಕೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಫೈರಿಂಗ್ ಗೆ ಮೊದಲು ಆರೋಪಿಯು ಚೂರಿಯಿಂದ ಪೊಲೀಸರ ಮೇಲೆ ದಾಳಿ ನಡೆಸಿದ್ದು, ಈ ಸಂದರ್ಭ ಹೆಡ್‌ಕಾನ್‌ಸ್ಟೆಬಲ್ ಪ್ರಕಾಶ್ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಕೊಲೆ, ಕೊಲೆಯತ್ನ, ಅತ್ಯಾಚಾರ, ಸುಲಿಗೆ ಸಹಿತ 25 ಪ್ರಕರಣಗಳ ಆರೋಪಿಯಾಗಿದ್ದ ರೌಡಿಶೀಟರ್ ಶರಣ್ ಸುಳ್ಯದ ಕೆವಿಜಿ ಪಾಲಿಟೆಕ್ನಿಕ್ ಕಾಲೇಜಿನ ಆಡಳಿತಾಧಿಕಾರಿ ರಾಮಕೃಷ್ಣ ಕೊಲೆ ಪ್ರಕರಣದ ದೋಷಿಯಾಗಿದ್ದ. ಆದರೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಈತನ ವಿರುದ್ಧ ವಾರಂಟ್ ಹೊರಡಿಸಲಾಗಿತ್ತು.
ಜ.2ರಂದು ನಗರದ ಮೇರಿಹಿಲ್ ಬಳಿ ಪೊಲೀಸರು ಬಂಧಿಸಲು ಯತ್ನಿಸಿದಾಗ ಆರೋಪಿಯು ಪೊಲೀಸರ ವಾಹನಕ್ಕೆ ತನ್ನ ವಾಹನ ಢಿಕ್ಕಿ ಹೊಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಮಂಗಳವಾರ ಸಂಜೆ ಜಪ್ಪು ಕುಡ್ಪಾಡಿಯಲ್ಲಿ ಈತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.