ಬೆಂಗಳೂರು: ಜನರಿಂದ 50 ಲಕ್ಷ ಹಣ ಪಡೆದು ವಂಚಿಸಿದ್ದ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರತಾಪ್ ಸಿಂಹ ಬಂಧಿತ ಆರೋಪಿ.
ಆರೋಪಿ ಪ್ರತಾಪ್ ಸಿಂಹ ಅಂಧರ, ವೃದ್ಧರ ಮತ್ತು ಅಂಗವಿಕಲರನ್ನು ಪೋಷಿಸುವ ಎನ್ ಜಿಓಗಳಿಗೆ ಭೇಟಿ ನೀಡಿ, ನಿಮಗೆ ಸರ್ಕಾರದಿಂದ ಸಿಎಸ್ ಆರ್ ಫಂಡ್ ಕೊಡಿಸುತ್ತೇನೆಂದು ಹಣ ಪಡೆದಿದ್ದನು. ಅಲ್ಲದೆ ಸರ್ಕಾರದಿಂದ ಲ್ಯಾಪ್ ಟ್ಯಾಪ್ ಕೊಡಿಸುತ್ತೇನೆ ಎಂದು ಸಾಮಾನ್ಯ ಜನರಿಂದ ಹಣ ಪಡೆದಿದ್ದನು.
ಇದು ಮಾತ್ರವಲ್ಲದೆ ನಿಮ್ಮ ಬೆಳೆಗಳಿಗೆ ಹೆಚ್ಚಿನ ಲಾಭಾಂಶ ಕೊಡಿಸುತ್ತೇನೆ, ಸರ್ಕಾರದಿಂದ ಸಬ್ಸಿಡಿ ಕೊಡಿಸುತ್ತೇನೆ. ಎಳನೀರು ಹೊರರಾಜ್ಯಗಳಿಗೆ ಮಾರಾಟ ಮಾಡಿಸುತ್ತೇನೆ ಎಂದು ಮಂಡ್ಯ, ಮೈಸೂರು ಮತ್ತು ತುಮಕೂರು ಭಾಗದ ರೈತರಿಂದ ಹಣ ಪಡೆದಿದ್ದನು.
ದೆಹಲಿ, ಲಕ್ನೋ, ಆಗ್ರಾ, ಹಿಮಾಚಲ ಪ್ರದೇಶ ವ್ಯಾಪಾರಿಗಳಿಗೆ ವಿವಿಧ ಆಸೆ ತೋರಿಸಿ ಹಣ ಪಡೆದು ವಂಚಿಸಿದ್ದನು. ಹೀಗೆ ಆರೋಪಿ ಪ್ರತಾಪ್ ಸಿಂಹ ಒಟ್ಟು 50 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಸಿಸಿಬಿ ವಿಶೇಷ ವಿಚಾರಣಾ ದಳ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.