ಬೆಂಗಳೂರು: ಆರ್.ಟಿ.ನಗರ ಠಾಣಾ ವ್ಯಾಪ್ತಿಯ ಮಠದಹಳ್ಳಿಯಲ್ಲಿ ಮಹಿಳೆಯೊಬ್ಬಳಿಗೆ ಚಾಕುವಿನಿಂದ ಇರಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚೂರಿ ಇರಿತಕ್ಕೊಳಗಾದ ಮಹಿಳೆ ಹಬೀಬಾ ತಾಜ್ (30) ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆರೋಪಿ ಶೇಕ್ ಮೆಹಬೂಬ್ (32)ನ್ನು ಪೊಲೀಸರು ಬಂಧಿಸಿದ್ದಾರೆ.
ಚಾಕು ಇರಿತಕ್ಕೊಳಗಾದ ಹಬೀಬಾ ತಾಜ್’ಗೆ ವಿವಾಹವಾಗಿತ್ತು. 6 ವರ್ಷಗಳ ಹಿಂದೆ ಹಿಂದೆ ಪತಿ ತೀರಿಕೊಂಡಿದ್ದ. ಎರಡು ಮಕ್ಕಳ ಜೊತೆಗೆ ವಾಸಮಾಡಿಕೊಂಡಿದ್ದ ಹಬೀಬಾಗೆ ಕಳೆದ ಕೆಲವು ವರ್ಷಗಳ ಹಿಂದೆ ಆರೋಪಿ ಶೇಕ್ ಮೆಹಬೂಬ್’ನ ಪರಿಚಯವಾಗಿತ್ತು. ಆಟೋ ಚಾಲಕನಾಗಿರುವ ಶೇಕ್ ಮೆಹಬೂಬ್’ಗೂ ಮದುವೆಯಾಗಿದ್ದು ಮಕ್ಕಳಿದ್ದಾರೆ. ಆದರೂ ಶೇಕ್ ಮೆಹಬೂಬ್ ಹಬೀಬಾಳೊಂದಿಗೆ ಸಲುಗೆಯಿಂದ ಇದ್ದ.
ಇತ್ತೀಚೆಗೆ ಶೇಕ್ ಮೆಹಬೂಬ್ ನಿಂದ ದೂರವಾಗಲು ಯತ್ನಿಸಿದ್ದ ಹಬೀಬಾ, ಬೇರೆ ಮದುವೆಯಾಗಲು ಸಿದ್ಧತೆ ನಡೆಸಿದ್ದರು. ಈ ವಿಚಾರ ತಿಳಿದ ಆರೋಪಿ ತಡರಾತ್ರಿ ಹಬೀಬಾಳ ಮನೆಗೆ ಬಂದು ಕ್ಯಾತೆ ತೆಗೆದಿದ್ದಾನೆ. ಬಳಿಕ ಇಬ್ಬರ ತಾರಕಕ್ಕೇರಿದ್ದು, ಈ ವೇಳೆ ಹಬೀಬಾಗೆ ಶೇಕ್ ಮೆಹಬೂಬ್ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಸದ್ಯ ಗಾಯಾಳು ಮಹಿಳೆಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.
ಈ ಸಂಬಂಧ ಮಹಿಳೆಯ ಸಹೋದರ ಆರ್.ಟಿ.ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.