ಮನೆ ಅಪರಾಧ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ: ೬.೫ ಕೆಜಿ ಗಾಂಜಾ ವಶ

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ: ೬.೫ ಕೆಜಿ ಗಾಂಜಾ ವಶ

0

ವಿರಾಜಪೇಟೆ(Virajapete): ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಿರಾಜಪೇಟೆ ನಗರ ಠಾಣಾ ಪೊಲೀಸರು ಬಂಧಿಸಿದ್ದು, ಸುಮಾರು ಒಂದೂವರೆ ಲಕ್ಷ ಮೌಲ್ಯದ ೬.೫ ಕೆ.ಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು, ೧,೨೦೦ ರೂ. ನಗದು, ೨ ಮೊಬೈಲ್, ಪ್ಯಾಕ್ ಮಾಡಲು ಬಳಸಿದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.

ವಿರಾಜಪೇಟೆ ಕೊಡವ ಸಮಾಜ ಬಳಿ ವಾಸವಿದ್ದ ಸೂರ್ಯಕಾಂತ ಮೊಹಂತಿ(೩೬) ಬಂಧಿತ ಆರೋಪಿ.

ಸೋಮವಾರ ಬೆಳಿಗ್ಗೆ ಆರೋಪಿ ತನ್ನ ಕಾರಿನಲ್ಲಿ ಕೇರಳ ಕಡೆಗೆ ಗಾಂಜಾ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ವಿರಾಜಪೇಟೆ ನಗರ ಠಾಣಾ ಪೊಲೀಸರು, ಪರಿಶೀಲಿಸಿದಾಗ ೩ ಕೆ.ಜಿಯಷ್ಟು ಗಾಂಜಾ ಪತ್ತೆಯಾಗಿದೆ. ಆತನನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಹೆಚ್ಚಿನ ವಿಚಾರಣೆ ನಡೆಸಿದಾಗ ಈತ ಸುಮಾರು ೧೮ ವರ್ಷಗಳಿಂದ ವಿರಾಜಪೇಟೆಯಲ್ಲಿ ವಾಸವಿದ್ದು, ಓಡಿಸ್ಸಾ ರಾಜ್ಯದಿಂದ ಅಕ್ರಮವಾಗಿ ಗಾಂಜಾವನ್ನು ತೆಗೆದುಕೊಂಡು ಬಂದು ಕೇರಳ ರಾಜ್ಯದವರಿಗೆ ಮತ್ತು ತನ್ನ ಪರಿಚಯಸ್ಥರಿಗೆ ಮಾರಾಟ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾನೆ. ಅದರಂತೆ ತನ್ನ ರೂಂನಲ್ಲಿ ಮತ್ತೆ ೩ ಕೆ.ಜಿ.ಯಷ್ಟು ಗಾಂಜಾ ಇಟ್ಟಿರುವುದನ್ನು ಆರೋಪಿ ಪೊಲೀಸರಿಗೆ ಒಪ್ಪಿಸಿದ್ದಾನೆ.

ಪೊಲೀಸ್ ಅಧೀಕ್ಷಕರು ಮತ್ತು ವಿರಾಜಪೇಟೆ ಉಪಾಧೀಕ್ಷಕರ ಮಾರ್ಗದರ್ಶನದಲ್ಲಿ, ವಿರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್. ಶಿವರುದ್ರ ಮೇಲ್ವಿಚಾರಣೆಯಲ್ಲಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯ ಪಿಎಸ್‌ಐ ಸಿ.ಪಿ. ಶ್ರೀಧರ್, ಅಪರಾಧ ವಿಭಾಗದ ಪಿಎಸ್‌ಐ ಎಂ.ಸಿ.ಮುತ್ತ, ಪ್ರೊಬೇಷನರಿ ಪಿಎಸ್‌ಐ ಮಂಜುನಾಥ ಮತ್ತು ಸಿಬ್ಬಂದಿಗಳಾದ ಗಿರೀಶ್, ಮುಸ್ತಾಫಾ, ಧರ್ಮ, ಸತೀಶ, ಶೆಟ್ಟಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ವಿರಾಜಪೇಟೆ ನಗರ ಠಾಣಾ ಪೊಲೀಸರ ಕಾರ್ಯಚರಣೆಯನ್ನು ಎಸ್‌ಪಿ ಅಯ್ಯಪ್ಪ ಶ್ಲಾಘಿಸಿದ್ದಾರೆ.