ಮನೆ ಅಪರಾಧ ಪ್ರತಿಷ್ಟಿತ ಬಡಾವಣೆಗಳ ಸೈಟ್, ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿದ್ದ ಮೂವರ ಬಂಧನ

ಪ್ರತಿಷ್ಟಿತ ಬಡಾವಣೆಗಳ ಸೈಟ್, ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸ ಮಾಡುತ್ತಿದ್ದ ಮೂವರ ಬಂಧನ

0

ಮೈಸೂರು(Mysuru): ಅಪಾರ್ಟ್​ಮೆಂಟ್​​ವೊಂದರಲ್ಲಿ ಕುಳಿತು ನಗರದ ಪ್ರತಿಷ್ಠಿತ ಬಡಾವಣೆಗಳ ಸೈಟ್​ ಮತ್ತು ಜಮೀನುಗಳ ನಕಲಿ ದಾಖಲೆ ಸೃಷ್ಟಿಸಿ ಮೋಸದಿಂದ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಕುವೆಂಪು ನಗರ ಪೊಲೀಸರು ಬಂಧಿಸಿದ್ದಾರೆ.

ನಗರ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಪ್ರವೀಣ್ ಗುಂಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಖದೀಮರನ್ನು ಬಂಧಿಸಿದೆ.

ಬೆಂಗಳೂರಿನ ಶಿವಾಜಿನಗರ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಮೂಲತಃ ಮೈಸೂರಿನವರಾಗಿದ್ದಾರೆ. ಅವರ ತಂದೆ ನಗರದ ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸೈಟ್ ಹೊಂದಿದ್ದಾರೆ. ಆ ಸೈಟ್​ಗೆ ವಂಚಕರು ನಕಲಿ ದಾಖಲೆ ಹಾಗೂ ಮಾಲೀಕರನ್ನು ಸೃಷ್ಟಿಸಿ ಮಾರಾಟ ಮಾಡಿದ್ದರು.

ಶಾಸಕರ ತಂದೆ ತಮ್ಮ ನಿವೇಶನಕ್ಕೆ ಸಂಬಂಧಿಸಿದಂತೆ ದಾಖಲೆ ಪಡೆಯಲು ಬಂದಾಗ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ಮೆಟಗಳ್ಳಿ ಪೊಲೀಸ್ ಠಾಣೆಗೂ ಅವರು ದೂರು ನೀಡಿದ್ದರು.

ಬಂಧಿತ ಆರೋಪಿಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಲು ಬಳಸುತ್ತಿದ್ದ ಲ್ಯಾಪ್​ಟ್ಯಾಪ್, ಪ್ರಿಂಟರ್, ಸ್ಕ್ಯಾನರ್, ಮೊಬೈಲ್ ಹಾಗೂ ವಿವಿಧ ಬ್ಯಾಂಕ್ ಮತ್ತು ವಿವಿಧ ಇಲಾಖೆ ಅಧಿಕಾರಿಗಳ ನಕಲಿ ಸೀಲ್​ಗಳನ್ನು ವಶಪಡಿಸಿಕೊಂಡಿದ್ದು, ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ವಿಚಾರಣೆ ಹಿನ್ನೆಲೆಯಲ್ಲಿ ಆರೋಪಿಗಳ ಹೆಸರನ್ನು ಪೊಲೀಸರು ಬಹಿರಂಗ ಪಡಿಸಿಲ್ಲ.

ಈ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.