ಹನೂರು(Hanur): ಗಂಡು ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸುವ ವೇಳೆ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿರುವ ಘಟನೆ ಕೌದಳ್ಳಿ ವನ್ಯಜೀವಿ ವಲಯದಲ್ಲಿ ಜರುಗಿದೆ.
ತಾಲ್ಲೂಕಿನ ಹೊಸಳ್ಳಿ ಗ್ರಾಮದ ತಿಪ್ಪಬೋವಿ (55) ಇ ವಿಲೇಜ್ ಗ್ರಾಮದ ಸಿದ್ದರಾಜು (45) ಬಂಧಿತ ಆರೋಪಿಗಳಾಗಿದ್ದಾರೆ.
ಘಟನೆಯ ವಿವರ : ಕಾವೇರಿ ವನ್ಯಜೀವಿ ಉಪ ವಿಭಾಗ ಕೌದಳ್ಳಿ ವನ್ಯಜೀವಿ ವಲಯ ವ್ಯಾಪ್ತಿಯ ಚೆನ್ನೂರು ಗಸ್ತಿನ ಸಿಪಿಟಿ -44 ಮೂಲೆನಜರು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಜಿಂಕೆ ಬೇಟೆಯಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಾವೇರಿ ವನ್ಯಜೀವಿ ಉಪ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ನಂದೀಶ್ ಎಸ್ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಂಕರಾಜು ರವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಲೋಕೇಶ್ ಚೌಹಾಣ್ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ.
ಜಿಂಕೆ ಸಾಯಿಸಲು ಬಳಸಿದ್ದ ಆಯುಧಗಳು, ಜಿಂಕೆ ಚರ್ಮ, ಮಾಂಸ ಹಾಗೂ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಾಳಿಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಬಿ ಅನಂತರಾಮು, ಅರಣ್ಯ ರಕ್ಷಕರಾದ ಮಲ್ಲಿಕಾರ್ಜುನ್ ಭೀಮಪ್ಪ ಹಂಗರಗಿ, ಮಹೇಂದ್ರ ಎಸ್ ಎನ್, ಅಭಿಷೇಕ್ ಹಾಗೂ ಕ್ಷೇಮಾಭಿವೃದ್ಧಿ ನೌಕರ ನೀಲಶೆಟ್ಟಿ ಪಾಲ್ಗೊಂಡಿದ್ದರು.