ಮನೆ ಕಾನೂನು ಸೂರ್ಯಾಸ್ತದ ನಂತರ ಮಹಿಳೆಯ ಬಂಧನ: ಮಾರ್ಗಸೂಚಿ ರೂಪಿಸಲು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

ಸೂರ್ಯಾಸ್ತದ ನಂತರ ಮಹಿಳೆಯ ಬಂಧನ: ಮಾರ್ಗಸೂಚಿ ರೂಪಿಸಲು ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಆದೇಶ

0

ವಿಶೇಷ ಸಂದರ್ಭಗಳಲ್ಲಿ ಕೂಡ ಸೂರ್ಯಾಸ್ತದ ಬಳಿಕ ಮಹಿಳೆಯನ್ನು ಬಂಧಿಸುವಾಗ ಪೊಲೀಸರು ಸಿಆರ್’ಪಿಸಿ ಸೆಕ್ಷನ್ 46 (4) ರ ನಿಯಮಾವಳಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಏಕರೂಪದ ಮಾರ್ಗಸೂಚಿ ರೂಪಿಸುವಂತೆ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.

 [ಎಸ್ ಸಲ್ಮಾ ಮತ್ತು ರಾಜ್ಯ ಸರ್ಕಾರ ನಡುವಣ ಪ್ರಕರಣ].

ಎಂಟು ವಾರದೊಳಗೆ ಮಾರ್ಗಸೂಚಿ ರೂಪಿಸಬೇಕು ಎಂದು ಮಾರ್ಚ್ 16 ರಂದು ನೀಡಲಾದ ತೀರ್ಪಿನಲ್ಲಿ, ನ್ಯಾಯಮೂರ್ತಿ ಅನಿತಾ ಸುಮಂತ್ ಅವರು ಸೂಚಿಸಿದರು.

ಸೂರ್ಯಾಸ್ತದ ಬಳಿಕ ಮಹಿಳೆಯ  ಬಂಧನವನ್ನು ಸಿಆರ್’ಪಿಸಿ ಸೆಕ್ಷನ್ 46 (4) ನಿಷೇಧಿಸುತ್ತದೆ. ವಿಶೇಷ ಸಂದರ್ಭಗಳಲ್ಲಿ ಕೂಡ ಸೂರ್ಯಾಸ್ತದ ಬಳಿಕ ಮಹಿಳೆಯನ್ನು ಸ್ತ್ರೀ ಪೊಲೀಸ್ ಅಧಿಕಾರಿಯ ಉಪಸ್ಥಿತಿಯಲ್ಲಿ ಬಂಧಿಸಬೇಕು. ಮತ್ತು ಲಿಖಿತ ವರದಿ ಸಲ್ಲಿಸಿದ ನಂತರ ಮತ್ತು ಅವರ ಸ್ಥಳೀಯ ಅಧಿಕಾರ ವ್ಯಾಪ್ತಿಯ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರ  ಪೂರ್ವಾನುಮತಿ ಪಡೆದ ನಂತರ ಬಂಧಿಸಬೇಕು ಎಂದು ಅದು ಹೇಳುತ್ತದೆ.

ಸಿಆರ್’ಪಿಸಿ ಸೆಕ್ಷನ್ 46(4)ರ ಅಡಿಯಲ್ಲಿನ ಅವಶ್ಯಕತೆಗಳನ್ನು ಪೂರೈಸುವುದು ಕಡ್ಡಾಯವಾಗಿದ್ದು ಆದೇಶಗಳನ್ನು ಪಾಲಿಸದೆ ಇರುವುದಕ್ಕೆ ಸಿಆರ್ಪಿಸಿ ಅವಕಾಶ ಒದಗಿಸುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ.

ಮುಖ್ಯಮಂತ್ರಿ ಜೆ ಜಯಲಲಿತಾ ಅವರ ವಿರುದ್ಧ ಕರಪತ್ರಗಳನ್ನು ಹಂಚುತ್ತಿದ್ದಾರೆ ಎಂದು ಎಐಎಡಿಎಂಕೆ ಸದಸ್ಯರೊಬ್ಬರು ಪತ್ರಕರ್ತೆಯೊಬ್ಬರ ವಿರುದ್ಧ  2012ರಲ್ಲಿ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪತ್ರಕರ್ತೆಯನ್ನು ಬಂಧಿಸಿದ್ದರು. ಆದರೆ, ರಾತ್ರಿ 10 ಗಂಟೆಗೆ ತನ್ನನ್ನು ಬಂಧಿಸಲಾಗಿದ್ದು ಮಹಿಳಾ ಪೊಲೀಸ್ ಅಧಿಕಾರಿ ಇದ್ದರೂ, ನ್ಯಾಯಾಧೀಶರ ಪೂರ್ವಾನುಮತಿ ನಡೆಯದೆ ನನ್ನನ್ನು ಬಂಧಿಸಲಾಗಿದೆ. ಹೀಗಾಗಿ ₹25 ಲಕ್ಷ ಪರಿಹಾರ ನೀಡುವಂತೆ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಪತ್ರಕರ್ತೆಗೆ ಯಾವುದೇ ಪರಿಹಾರ ನೀಡದ ಹೈಕೋರ್ಟ್  ಮಹಿಳೆಯ ಬಂಧನಕ್ಕೆ ಸಂಬಂಧಿಸಿದ ಕಾರ್ಯವಿಧಾನದ ಅಕ್ರಮಗಳ ಬಗೆಗಿನ ಕಾನೂನು ಪ್ರಶ್ನೆಯನ್ನು ಸೂಕ್ತ ರೀತಿಯಲ್ಲಿ ನಿರ್ಧರಿಸಬೇಕು ಎಂದು ಅಭಿಪ್ರಾಯಪಟ್ಟಿತು. ಹಾಗಾಗಿ ಸೆಕ್ಷನ್ 46 (4) ಪಾಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಮಾರ್ಗಸೂಚಿ ರೂಪಿಸುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿತು.