ದಾವಣಗೆರೆ: ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 14 ತಿಂಗಳಿಂದ ಚಿತ್ರದುರ್ಗ ಜಿಲ್ಲಾ ಕಾರಾಗೃಹದಲ್ಲಿದ್ದ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ ಹೊಂದಿದ ನಂತರ ದಾವಣಗೆರೆಯ ವಿರಕ್ತ ಮಠಕ್ಕೆ ಆಗಮಿಸಿದರು.
ದೊಡ್ಡಪೇಟೆಯಲ್ಲಿರುವ ವಿರಕ್ತ ಮಠಕ್ಕೆ ತೆರಳುವ ಮುನ್ನ ಶ್ರೀ ಶಿವಯೋಗಿ ಮಂದಿರ ಆವರಣದಲ್ಲಿರುವ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿ ಮತ್ತು ಅಥಣಿ ಮುರುಘರಾಜೇಂದ್ರ ಶಿವಯೋಗಿಗಳ ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸಿದರು.
ಮುರುಘಾ ಶರಣರ ಬರುವಿಕೆಗೆ ಕಾಯುತ್ತಿದ್ದ ಭಕ್ತರು, ಟ್ರಸ್ಟ್ ಪದಾಧಿಕಾರಿಗಳು ಶರಣರು ಆಗಮಿಸುತ್ತಿ ದ್ದಂತೆ ಹೂಮಾಲೆ ಹಾಕಿ ಸ್ವಾಗತಿಸಿದರು. ಮುರುಘೇಶನಿಗೆ, ಶಿವಮೂರ್ತಿ ಮುರುಘಾ ಶರಣರಿಗೆ ಜಯವಾಗಲಿ ಎಂದು ಜೈಕಾರ ಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಮೂರ್ತಿ ಮುರುಘಾ ಶರಣರು, ತಾವು ಯಾವುದರ ಬಗ್ಗೆಯೂ ಪ್ರತಿಕ್ರಿಯೆ ನೀಡುವುದಿಲ್ಲ. ಮೌನವೇ ನಮಗೆ ಒಳಿತು ಎನಿಸುತ್ತದೆ. ನಮ್ಮ ವಕೀಲರು ಎಲ್ಲವನ್ನು ಮಾಧ್ಯಮದವರಿಗೆ ಹೇಳಿದ್ದಾರೆ. ನಿಮ್ಮ ಸಹಕಾರ ಇರಲಿ. ಮುಂದೆ ಒಳ್ಳೆಯ ಕೆಲಸ ಮಾಡೋಣ ಎಂದರು.
ಚಿತ್ರದುರ್ಗ ಕಾರಾಗೃಹದಿಂದ ಬಿಡುಗಡೆ ಹೊಂದಿ ದಾವಣಗೆರೆಗೆ ಆಗಮಿಸುತ್ತಿದ್ದ ಮಾರ್ಗ ಮಧ್ಯೆದಲ್ಲಿಯೇ ಶಿವಮೂರ್ತಿ ಶರಣರು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗಿಯಾದರು. ಕೆಲ ಸಮಯ ನಡೆದ ವಿಚಾರಣೆ ನಂತರ ಶಿವಯೋಗಿ ಮಂದಿರಕ್ಕೆ ಆಗಮಿಸಿದರು.
ಶ್ರೀ ಶಿವಮೂರ್ತಿ ಮುರುಘಾ ಶರಣರು ಚಿತ್ರದುರ್ಗ ಜಿಲ್ಲೆಗೆ ಪ್ರವೇಶಿಸಲು ನ್ಯಾಯಾಲಯ ನಿರ್ಬಂಧ ವಿಧಿಸಿರುವ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲೇ ವಾಸ್ತವ್ಯ ಮಾಡಲಿದ್ದಾರೆ. ದೊಡ್ಡಪೇಟೆಯಲ್ಲಿನ ವಿರಕ್ತ ಮಠದಲ್ಲಿ ಇರುವ ಮುರುಘಾ ಶರಣರು ಶಿವಯೋಗಿ ಮಂದಿರದಲ್ಲಿ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವರು ಎಂದು ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದ್ದಾರೆ.